ಉಡುಪಿ: ಎಲ್‌ಐಸಿ ದಕ್ಷಿಣ ಮಧ್ಯವಲಯ ಕ್ರೀಡಾಕೂಟ ಸಮಾರೋಪ
ಉಡುಪಿ, ಆ.25: ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಎಲ್ಲೈಸಿ ದಕ್ಷಿಣ ಮಧ್ಯ ವಲಯ ಕ್ರೀಡಾಕೂಟ ಹಾಗೂ ವಾಲಿಬಾಲ್ ತಂಡಗಳ ಆಯ್ಕೆ ಪಂದ್ಯಾಟ ಗುರುವಾರ ಸಂಜೆ ಮುಕ್ತಾಯಗೊಂಡಿತು.
ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಎಲ್ಲೈಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುಧೋಳ್ ಭಾಗವಹಿಸಿ ಪದಕ ವಿಜೇತ ಕ್ರೀಡಾಳುಗಳನ್ನು ಅಭಿನಂದಿ ಸಿದರು. ಅಖಿಲ ಭಾರತ ಮಟ್ಟದಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವಂತೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಎಲ್ಲೈಸಿ ಉಡುಪಿ ವಿಭಾಗದ ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್, ಎಲ್ಲೈಸಿ ಕ್ರೀಡಾ ಉತ್ತೇಜನಾ ಮಂಡಳಿಯ ಸದಸ್ಯರಾದ ಡಿ.ವಿ.ಎಸ್.ವೈ ಶರ್ಮ ಮತ್ತು ಜೆ.ಸುರೇಶ್, ಕಾರ್ಮಿಕ ಹಾಗೂ ಔದ್ಯೋಗಿಕ ಪ್ರಬಂಧಕ ಎಚ್. ಪ್ರಭಾಕರ್ ಮತ್ತು ಎಂ.ಎಲ್. ನಾರಾಯಣ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ವಿಭಾಗದ ಕ್ರೀಡಾ ಕಾರ್ಯದರ್ಶಿಯಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ ಶೇಖರ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಪುರುಷರ ವಿಭಾಗದ ಸ್ಪರ್ಧೆಗಳಲ್ಲಿ ಬೆಳಗಾವಿ ವಿಭಾಗದ ಬಾಬುರಾವ್ ಯಡಹಳ್ಳಿ ಅವರು 5000ಮೀ., ಮೈಸೂರು ವಿಭಾಗದ ಸುಪ್ರೀತ್‌ರಾಜ್ ಲಾಂಗ್‌ಜಂಪ್, ಉಡುಪಿ ವಿಭಾಗದ ಹರ್ಷಿತ್ ಕೆ. ಡಿಸ್ಕಸ್ ಥ್ರೋ, ಉಡುಪಿ ವಿಭಾಗದ ವಿಘ್ನೇಶ್ ಶೆಣೈ 400ಮೀ. ಓಟಗಳಲ್ಲಿ ಅಗ್ರಸ್ಥಾನಿಯಾದರು.
ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ವಿಭಾಗದ ಜೋಯ್‌ಲಿನ್ ಲೋಬೊ ಲಾಂಗ್‌ಜಂಪ್‌ನಲ್ಲಿ ಹ್ಯಾಮರ್ ತ್ರೋನಲ್ಲಿ ಮೈಸೂರು ವಿಭಾಗದ ಶೆಹಜಹಾನಿ ಅಗ್ರಸ್ಥಾನ ಪಡೆದರು. ಅಲ್ಲದೇ ಅಖಿಲ ಭಾರತ ವಾಲಿಬಾಲ್ ಸ್ಪರ್ಧೆಗೆ ಉಡುಪಿ ವಿಭಾಗದ 16 ಸದಸ್ಯರ ವಾಲಿಬಾಲ್ ತಂಡವನ್ನು ಆಯ್ಕೆ ಮಾಡಲಾಯಿತು.