ಉಡುಪಿ: ತಗ್ಗಿದ ಮಳೆ; ಬೆಳೆ, ಕೊಟ್ಟಿಗೆ, ಮನೆಗಳಿಗೆ ಹಾನಿ
ಉಡುಪಿ, ಜು.27: ಕಳೆದ ಕೆಲವು ದಿನಗಳಿಂದ ಸತತವಾಗಿ ಕಾಡಿದ ಮಳೆ ಪ್ರಮಾಣ ಕಡಿಮೆಯಾಗಿದೆ. ನಾಳೆ ಮುಂಜಾನೆಯವರೆಗೆ ಆರೆಂಜ್ ಅಲರ್ಟ್ ಇದ್ದು, ಬಳಿಕ ಒಂದು ದಿನ ಯೆಲ್ಲೋ ಅಲರ್ಟ್‌ನ್ನು ನೀಡಲಾಗಿದೆ. ಆ ಬಳಿಕ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆದರೆ ಮಳೆಯಿಂದ ಆಗಿರುವ ಹಾನಿಯ ಪ್ರಮಾಣ ಏರುತ್ತಿದೆ. ಜಿಲ್ಲೆಯಲ್ಲಿ ಇನ್ನೂ 24 ಮನೆಗಳಿಗೆ ಹಾಗೂ ವಿವಿದೆಡೆ ಐದು ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾದ ವರದಿಗಳು ಬಂದಿದ್ದು, ಹಳ್ಳಿಹೊಳೆಯಲ್ಲಿ ದಾರ ಬೋವಿ ಎಂಬವರ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, 50ಸಾವಿರಕ್ಕೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನ 11 ಉಳ್ಳೂರು ಗ್ರಾಮದ ಗೋವಿಂದ ಶೆಟ್ಟಿ, ನಾಡ ಗ್ರಾಮದ ರಾಮ ಆಚಾರಿಯವರ ಜಾನುವಾರು ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ಜಲಂಧರ ನಾಯಕ್, ಕಾರ್ಕಡ ಗ್ರಾಮದ ನರಸಿಂಹ ಹಾಗೂ ಚೇರ್ಕಾಡಿ ಗ್ರಾಮದ ಪಾವುಸ್ತೀನಿ ಡಿಸೋಜ ಅಲ್ಲದೇ ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಲಕ್ಷ್ಮೀ ಎಂಬವರ ಮನೆಗಳ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದ್ದು ಒಟ್ಟಾರೆಯಾಗಿ ಸುಮಾರು ಒಂದು ಲಕ್ಷ ರೂ.ಗಳ ನಷ್ಟ ಸಂಭವಿಸಿದೆ.
24 ಮನೆಗಳಿಗೆ ಹಾನಿ 10 ಲಕ್ಷ ರೂ.ನಷ್ಟ: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 24 ಮನೆಗಳಿಗೆ ಹಾನಿಯಾದ ಪ್ರಕರಣ ವರದಿ ಯಾಗಿದ್ದು, ಇದರಿಂದ 10 ಲಕ್ಷ ರೂ.ಗಳಿಗೂ ಆಧಿಕ ನಷ್ಟ ಉಂಟಾಗಿರುವ ಮಾಹಿತಿ ಸಿಕ್ಕಿದೆ.
ಉಡುಪಿ ತಾಲೂಕಿನ ಒಂದು ಪ್ರಕರಣದಲ್ಲಿ ಮೂರು ಲಕ್ಷ ರೂ., ಕುಂದಾಪುರ ತಾಲೂಕಿನ ಎಂಟು ಪ್ರಕರಣಗಳಿಂದ ಮೂರು ಲಕ್ಷ ರೂ., ಬೈಂದೂರಿನ ಐದು ಪ್ರಕರಣಗಳಿಂದ 1.33 ಲಕ್ಷ, ಕಾರ್ಕಳದ ನಾಲ್ಕು ಪ್ರಕರಣಗಳಲ್ಲಿ 1.25 ಲಕ್ಷ, ಬ್ರಹ್ಮಾವರದ ಐದು ಪ್ರಕರಣಗಳಲ್ಲಿ ಒಂದು ಲಕ್ಷ ರೂ. ಹಾಗೂ ಕಾಪುವಿನ ಒಂದು ಪ್ರಕರಣದಲ್ಲಿ 30 ಸಾವಿರ ರೂ.ನಷ್ಚವಾಗಿದೆ.
ಉಡುಪಿ ತಾಲೂಕು ಕಿದಿಯೂರು ಗ್ರಾಮದ ರತ್ನಾಕರ ಅಮೀನ್ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದ್ದು ಮೂರು ಲಕ್ಷ ರೂ.ಗಳಷ್ಟು ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಶಾರದಾ ಹಾಗೂ ಅಂತು ಮೇರಾ ಎಂಬವರ ಮನೆಗಳಿಗೆ ತಲಾ 50ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಗುಲಾಬಿ ಪೂಜಾರ್ತಿಯವರ ಮನೆಗೆ ಭಾಗಶ: ಹಾನಿಯಾಗಿ 60,000ರೂ.ನಷ್ಟವಾಗಿದೆ.
56.1ಮಿ.ಮೀ. ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 56.1 ಮಿ.ಮೀ. ಮಳೆಯಾಗಿದೆ.ಕುಂದಾಪುರದಲ್ಲಿ 70.4ಮಿ.ಮೀ, ಬೈಂದೂರಿನಲ್ಲಿ 62.7, ಕಾರ್ಕಳ 54.0, ಹೆಬ್ರಿ 49.1, ಉಡುಪಿ 44.3, ಕಾಪು 42.2, ಬ್ರಹ್ಮಾವರ 40.3ಮಿ.ಮೀ. ಮಳೆಯಾಗಿದೆ.