ಉಡುಪಿ: ‘ಮಾರುತ ಪ್ರಿಯ’ ವರ್ಣ ಚಿತ್ರಕಲಾ ಪ್ರದರ್ಶನ
ಉಡುಪಿ: ಮಾರುತ ಪ್ರಿಯ ಎನ್ನುವ ಶೀರ್ಷಿಕೆಯಡಿಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈ ಅವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಸುಮಾರು ೩೦ರಷ್ಟು ಕಲಾಕೃತಿಗಳ ವರ್ಣ ಚಿತ್ರಕಲಾ ಪ್ರದರ್ಶನ ಬಡಗು ಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಅನಾವರಣಗೊಂಡಿತು.
ಭಾವನಾ ಪೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿರುವ ಈ ಕಲಾಪ್ರದರ್ಶನದ ಸಂದರ್ಭದಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಮೊದಲ ದಿನದ ಚಿಂತನ-ಮಂಥನವನ್ನು ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ನಡೆಸಿ ಕೊಟ್ಟರು.
ಪ್ರಾಚೀನ ಗ್ರಂಥಗಳಲ್ಲಿನ ಪ್ರತಿಮಾ ಶಾಸ್ತ್ರಗಳ ಬಗ್ಗೆ ವಿವರಿಸಿದ ಅವರು, ಕಲಾವಿದರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ವಿವರಿಸಿದರು. ಕರಾವಳಿ ಭಾಗದಲ್ಲಿ ಹಲವಾರು ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಅನೂಹ್ಯ ಶಿಲ್ಪಗಳ ಶೈಲಿ ಮತ್ತು ಪ್ರತಿಮಾಗಳ ಬಗೆಗೆ ವಿವರಿಸುತ್ತ ಪ್ರಸ್ತುತ ಪ್ರದರ್ಶನದಲ್ಲಿರಿಸಿದ ಕಾವಿ ಕಲೆಯ ಕಲಾಕೃತಿಗಳು ಯಕ್ಷಗಾನೀಯ ಶೈಲಿಯ ಬಹು ಮಹತ್ವಪೂರ್ಣ ಕೃತಿಗಳೆಂಬುದಾಗಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರ್ಟಿಸ್ಟ್ ಫೋರಂನ ಅಧ್ಯಕ್ಷ ಹಾಗೂ ಹಿರಿಯ ಕಲಾವಿದ ರಮೇಶ್ ರಾವ್, ಕದಿಕೆ ಟ್ರಸ್ಟಿನ ಬಿ.ಸಿ.ಶೆಟ್ಟಿ, ಆರ್ಕಿಟೆಕ್ಟ್ ಸಂಪ್ರೀತ್‌ರಾವ್ ಮೊದಲಾದವರು ಉಪಸ್ಥಿತರಿದ್ದರು.
ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಕಲಾ ಪ್ರದರ್ಶನ ಇದಾಗಿದ್ದು, ಸೆ. 20ರ ಬುಧವಾರ ಸಂಜೆ 5 ಕ್ಕೆ ನಾಡೋಜ ಕೆ.ಪಿ.ರಾವ್ ಅವರೊಂದಿಗೆ ಚಿಂತನ- ಮಂಥನ ಹಾಗೂ ಸೆ.21ರ ಗುರುವಾರ ಸಂಜೆ ೫ಕ್ಕೆ ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶಮಂತಕೋಪಾಖ್ಯಾನ ತಾಳಮ ದ್ದಳೆ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಆರ್ಟಿಸ್ಟ್ಸ್ ಫೋರಂ ಉಡುಪಿ ಇವರ ಸಹಯೋಗದೊಂದಿಗೆ ನಡೆಯುತ್ತಿರುವ ಕಲಾ ಪ್ರದರ್ಶನವು ಸೆ.೨೪ರವರೆಗೆ ಸಂಜೆ ೩ರಿಂದ ೭ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.