ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ತೀವ್ರ ವಿಚಾರಣೆ
ಉಡುಪಿ, ನ.16: ನೇಜಾರು ತೃಪ್ತಿ ಲೇಔಟ್ ನಲ್ಲಿ ನಡೆದ ತಾಯಿ, ಮಕ್ಕಳ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ, ಏರ್ ಇಂಡಿಯಾ ಸಿಬ್ಬಂದಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ನ.14ರಂದು ಬೆಳಗಾವಿಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ.15ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದ ಹಿನ್ನೆಲೆಯಲ್ಲಿ ತಮ್ಮ ವಶದಲ್ಲಿರುವ ಆರೋಪಿಯನ್ನು ಪೊಲೀಸರು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಾಕಷ್ಟು ಸಾಕ್ಷ್ಯ ಸಂಗ್ರಹ ಹಾಗೂ ಮಾಹಿತಿಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ಪ್ರವೃತ್ತ ರಾಗಿದ್ದಾರೆ. ಆತ ಕೊಲೆಯ ಸಂದರ್ಭದಲ್ಲಿ ಡ್ರಗ್ಸ್ ಸೇವಿಸಿದ್ದಾನೆಯೇ ಅಥವಾ ಆತ ಡ್ರಗ್ಸ್ ವ್ಯಸನಿಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ನೇಜಾರು ಮನೆ ಬಳಿ ಜನಸ್ತೋಮ:
ಬಂಧಿತ ಆರೋಪಿಯನ್ನು ಮಹಜರು ನಡೆಸಲು ಕೃತ್ಯ ಎಸಗಿದ ಮನೆ ಬಳಿ ಕರೆದುಕೊಂಡು ಬರಬಹುದೆಂಬ ನಿರೀಕ್ಷೆ ಯಲ್ಲಿ ಇಂದು ಬೆಳಗ್ಗಿನಿಂದಲೇ ಜನ ಸೇರಿರುವುದು ಕಂಡುಬಂದಿದೆ.
ಬೆಳಗ್ಗೆಯೇ ಆರೋಪಿಯನ್ನು ಮನೆ ಬಳಿ ಕರೆದುಕೊಂಡು ಬಂದು ಮಹಜರು ನಡೆಸಬಹುದು ಎಂಬ ಸುದ್ದಿ ಹರಡಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯರು ಆರೋಪಿ ಯನ್ನು ನೋಡಲು ಮನೆಯ ಸುತ್ತಮುತ್ತ ಜಮಾಯಿಸಿದ್ದಾರೆ. ಆದರೆ ಮಧ್ಯಾಹ್ನದವರೆಗೆ ಪೊಲೀಸರು ಆರೋಪಿಯನ್ನು ಅಲ್ಲಿಗೆ ಕರೆತಂದಿಲ್ಲ ಎಂಬ ಮಾಹಿತಿ ದೊರೆತಿದೆ.