ಉಡುಪಿ | ತಾಯಿ, ಮಕ್ಕಳ ಕೊಲೆ ಪ್ರಕರಣ; ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳದ ಸಂಸದೆ ಶೋಭಾ ವರ್ತನೆ ನಾಚಿಕೆಗೇಡು: ರಮೇಶ್ ಕಾಂಚನ್
ಉಡುಪಿ, ನ.18: ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸುವಂತಹ ರೀತಿಯಲ್ಲಿ ನೇಜಾರಿನಲ್ಲಿ ಒಂದೇ ಮನೆಯ ನಾಲ್ಕು ಮಂದಿ ಕೊಲೆಯಾದರೂ ಕೂಡ ಕನಿಷ್ಠ ಸೌಜನ್ಯಕ್ಕಾದರೂ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಲು ಸಾಧ್ಯವಾಗದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ವರ್ತನೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಕೂಡ ಯಾರೇ ಸತ್ತರೂ ಅದಕ್ಕೆ ಧರ್ಮದ ರಾಜಕೀಯವನ್ನು ಬೆರೆಸಿ ಅರಚಾಟ ಮಾಡುವ ಸಂಸದೆಯವರು ತನ್ನದೇ ಕ್ಷೇತ್ರದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಒಬ್ಬ ವ್ಯಕ್ತಿಯಿಂದ ಅಮಾನುಷ ವಾಗಿ ಕೊಲೆಯಾದರೂ ಮೌನವಾಗಿದ್ದಾರೆ. ಕೊಲೆಯಾದವರಲ್ಲಿ ಮೂವರು ಮಹಿಳೆಯರಾಗಿದ್ದು, ಓರ್ವ ಮಹಿಳಾ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರು ಕನಿಷ್ಠ ಪಕ್ಷ ಮೃತ ಕುಟುಂಬದ ಸದಸ್ಯರ ದುಃಖದಲ್ಲಿ ಭಾಗಿಯಾಗುವ ಸೌಜನ್ಯ ಕೂಡ ತೋರಿಸದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಸಂಸದರಾದವರು ಕೇವಲ ಒಂದು ಧರ್ಮಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಲ್ಲ ಎನ್ನುವುದನ್ನು ಶೋಭಾ ಕರಂದ್ಲಾಜೆಯವರು ಮರೆತಿದ್ದಾರೆ. ಜಿಲ್ಲೆಯಿಂದ ಆಯ್ಕೆಯಾದ ಸಂಸದೆ ಪ್ರತಿಯೊಂದು ವಿಚಾರವನ್ನು ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೆ ಉಪಯೋಗಿಸುವುದನ್ನು ಬಿಟ್ಟು ಸ್ವಲ್ಪ ಮನುಷ್ಯತ್ವಕ್ಕೂ ಬೆಲೆ ನೀಡುವ ಕೆಲಸ ಮಾಡಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.