ಉಡುಪಿ: ಅಂತಾರಾಷ್ಟ್ರೀಯ ಭದ್ರತೆ, ಶಾಂತಿ, ಮಾಧ್ಯಮ ಕುರಿತು ರಾಷ್ಟ್ರೀಯ ಸಮ್ಮೇಳನ
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು, ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ಜೊತೆ ಸೇರಿ ‘ಭಾರತ, ಅಂತಾರಾಷ್ಟ್ರೀಯ ಭದ್ರತೆ, ಶಾಂತಿ ಹಾಗೂ ಮಾಧ್ಯಮ’ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮಣಿಪಾಲದಲ್ಲಿ ಆಯೋಜಿಸಿದ್ದು,ಹೆಚ್ಚು ಶಾಂತಿಯುತವಾದ, ನ್ಯಾಯಯುತವಾದ ಮತ್ತು ಸುಸ್ಥಿರವಾದ ಜಾಗತಿಕ ವ್ಯವಸ್ಥೆಯ ಆಶಯ ದೊಂದಿಗೆ ಮುಕ್ತಾಯಗೊಂಡಿತು.
ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ.ಟಿಎಂಎ ಪೈ ಇವರ ೧೨೫ನೇ ಹುಟ್ಟಿದ ವರ್ಷದ ಪ್ರಯುಕ್ತ ಜಿಯೋಪೊಲಿಟಿಕ್ಸ್ ಮತ್ತು ಇಂಟರ್‌ನೇಷನಲ್ ರಿಲೇಷನ್ಸ್, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ಜೊತೆಯಾಗಿ ಈ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದವು.
ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ, ಶಾಂತಿ, ನ್ಯಾಯ ಮತ್ತು ಸುಸ್ಥಿರತೆಯನ್ನು ಆಧರಿಸಿದ ಜಾಗತಿಕ ವ್ಯವಸ್ಥೆಗೆ ನಾವೆಲ್ಲರೂ ಶ್ರಮಿಸಬೇಕೆಂದು ಕರೆ ಇತ್ತರು. ಈ ನಿಟ್ಟಿನಲ್ಲಿ ಯುನೈಟೆಡ್ ನೇಷನ್ಸ್‌ನಲ್ಲಿ ಸದ್ಯ ಇರುವ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳಾಗಬೇಕೆಂಬ ಅಭಿಪ್ರಾಯ ವನ್ನು ಅವರು ವ್ಯಕ್ತಪಡಿಸಿದರು.
ಡಾ.ಟಿಎಂಎ ಪೈ ನಿಜವಾದ ಅರ್ಥದಲ್ಲಿ ಒಬ್ಬ ಗಾಂಧಿವಾದಿಯಾಗಿದ್ದರು. ಅವರು ಆರಂಭಿಸಿದ ಸಂಸ್ಥೆಗಳು ಗಾಂಧಿ ಆದರ್ಶದಿಂದ ಪ್ರೇರಣೆ ಪಡೆದಿದ್ಧವು. ಇಂದು ಮಾಹೆಯ ಜಿಯೋಪೊಲಿಟಿಕ್ಸ್, ಗಾಂಧಿಯನ್ ಸೆಂಟರ್ ಹಾಗೂ ಎಂಐಸಿ ಒಂದು ಶಾಂತಿಯುತ ಜಾಗತಿಕ ವ್ಯವಸ್ಥೆ ಮತ್ತು ಜವಾಬ್ದಾರಿಯುತ ಮಾಧ್ಯಮವನ್ನು ಮುನ್ನೆಲೆಗೆ ತರುತ್ತಿರುವುದು ಸಂತೋಷಕರ ವಿಷಯ ಎಂದು ಡಾ.ವೆಂಕಟೇಶ್ ನುಡಿದರು.
ಎರಡು ದಿನಗಳ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಿ.ಎಸ್.ರಾಘವನ್, ನಿವೃತ್ತ ರಾಯಭಾರಿ ಪಂಕಜ್ ಶರಣ್, ಯುನೆಸ್ಕೋ ಪೀಸ್ ಚೇರ್ ಮುಖ್ಯಸ್ಥ ಪ್ರೊ.ಎಂ.ಡಿ. ನಳಪತ್, ಐಸಿಡಬ್ಲ್ಯೂಎನ ಪ್ರತಿನಿಧಿ ಡಾ.ಸ್ತುತಿ ಬ್ಯಾನರ್ಜಿ, ಡಾ.ಬಿ.ಪಿ. ಸಂಜಯ್, ಡಾ.ರಾಜಾರಾಮ್ ತೋಳ್ಪಾಡಿ, ಡಾ. ಶೇಷಾದ್ರಿ ಚಾರಿ, ಪ್ರಭಾ ರಾವ್, ಡಾ. ಅಜಯ್ ಲೇಲೆ, ಡಾ. ರಾಘೋತ್ತಮ್, ಡಾ.ಸ್ಟಾನ್ಲೀ ಜಾನಿ, ಡಾ ಗುರ್ಬಸ್ ಅಕ್ತಾಸ್, ಪ್ರೊ.ಕೆ.ಪಿ. ವಿಜಯಲಕ್ಷ್ಮಿ, ಪ್ರೊ. ವರದೇಶ್ ಹಿರೇಗಂಗೆ, ಡಾ. ಪದ್ಮರಾಣಿ, ಡಾ.ರವೀಂದ್ರನಾಥನ್, ಶ್ರೀರಾಜ್ ಗುಡಿ, ಡಾ.ವಿಘ್ನೇಶ್ ರಾಮ್, ಡಾ. ಧನಶ್ರೀ ಜಯರಾಮ್, ಡಾ. ಸಂಕಲ್ಪ್ ಗುರ್ಜರ್, ಡಾ. ಅಮೃತ ಜಾಶ್ ಮಾತನಾಡಿದರು.
ಮಾಹೆ ಸಹಕುಲಪತಿ ಡಾ.ಮಧು ವೀರಾಘವನ್ ಹಾಗೂ ಕುಲಸಚಿವ ಡಾ ಗಿರಿಧರ ಕಿಣಿ ಉಪಸ್ಥಿತರಿದ್ಧರು.