ಉಡುಪಿ: ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಸೂಚನೆ
ಉಡುಪಿ, ಅ.26: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ)-2013 ಅಧಿನಿಯಮಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶದನ್ವಯ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ/ಖಾಸಗಿ ಕಛೇರಿಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್ ಫ್ಯಾಕ್ಟರಿಗಳು, ವಿಶ್ವವಿದ್ಯಾಲಯ ಗಳು, ಸಂಘ-ಸಂಸ್ಥೆಗಳು ಹಾಗೂ ಜಿಲ್ಲೆ ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬರುವ ಸರಕಾರಿ/ಖಾಸಗಿ ಸಂಸ್ಥೆಗಳಲ್ಲಿ, ಉನ್ನತ ಮಟ್ಟದ ವೃತ್ತಿಪರ ಶಾಸನಬದ್ದ ಸಂಸ್ಥೆಗಳು ಮತ್ತು ನಿಯಂತ್ರಿಸುವವರನ್ನು ಒಳಗೊಂಡಂತೆ (ವೈದ್ಯರು,ವಕೀಲರು,ವಾಸ್ತುಶಿಲ್ಪಿಗಳು, ಲೆಕ್ಕ ಪರಿಶೋಧಕರು, ವೆಚ್ಚ ಲೆಕ್ಕ ಪರಿಶೋಧಕರು, ಇಂಜಿನಿಯರ್ಗಳು, ಬ್ಯಾಂಕರ್ಸ್ ಮತ್ತು ಇತರೇ ವೃತ್ತಿಪರರು)ಆಂತರಿಕ ದೂರು ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ.
ಆಂತರಿಕ ದೂರು ಸಮಿತಿಯಲ್ಲಿ ಹಿರಿಯ ಮಹಿಳಾ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಸಮಿತಿಯ ಸದಸ್ಯರುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರು ಹಾಗೂ ಕಡ್ಡಾಯವಾಗಿ ಎನ್ಜಿಒ ಪ್ರತಿನಿಧಿಯನ್ನು ನೇಮಿಸಿಕೊಳ್ಳಬೇಕು.
ಸಮಿತಿಯ ಸದಸ್ಯರುಗಳಲ್ಲಿ ಒಬ್ಬರು ಕಾನೂನಿನ ಪರಿಣತರಾಗಿರಬೇಕು. ಪ್ರತಿ 3 ವರ್ಷಗಳಿಗೊಮ್ಮೆ ಆಂತರಿಕ ದೂರು ಸಮಿತಿಯನ್ನು ಪುನರ್ ರಚಿಸಬೇಕು. ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಿ, ವರದಿ ಯನ್ನು ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.