ಉಡುಪಿ: ಅ.6ರಂದು ನಿವೇಶನ ರಹಿತ ಫಲಾನುಭವಿಗಳಿಂದ ಪ್ರತಿಭಟನೆ
ಉಡುಪಿ, ಅ.5: ಮಣಪಾಲ ಸಮೀಪದ ಹೆರ್ಗದಲ್ಲಿರುವ ಸರಕಾರಿ ವಸತಿ ಸಮುಚ್ಛಯಕ್ಕೆ ಮೂಲ ಸೌಕರ್ಯಗಳನ್ನು ಒದಗಿ ಸುವಲಂತೆ ಒತ್ತಾಯಿಸಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತ ಫಲಾನುಭವಿಗಳು ಇಂದು ಪ್ರತಿಭಟನೆ ನಡೆಸಿ ಪೌರಾ ಯುಕ್ತರಿಗೆ ಮನವಿ ಅರ್ಪಿಸಲಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗ ಗ್ರಾಮದ ಸರಕಾರಿ ವಸತಿ ಸಮುಚ್ಛಯದ ಮಹಡಿ ಮನೆ ಕಟ್ಟಡದ ಸುಮಾರು 240 ನಿವೇಶನ ರಹಿತ ಕುಟುಂಬಕ್ಕೆ ಕುಡಿಯುವ ನಳ್ಳಿ ನೀರು, ವಿದ್ಯುತ್ ಸಂಪರ್ಕ, ಪಕ್ಕಾ ಸಂಪರ್ಕ ರಸ್ತೆ, ದಾರಿದೀಪ, ಸಹಾಯ ಧನದೊಂದಿಗೆ ಬ್ಯಾಂಕ್ ಸಾಲ ಪಡೆಯುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಉಡುಪಿ ನಗರ ಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಅ.6ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಗರಸಭೆ ಎದುರು ಪ್ರತಿಭಟನೆ ನಡೆಯಲಿದೆ.
ಬಳಿಕ ಉಡುಪಿ ನಗರ ಸಭೆ ಪೌರಾಯುಕ್ತರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಅರ್ಪಿಸಲಿದ್ದಾರೆ ಎಂದು ಉಡುಪಿ ನಗರ ಸಭೆ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕರಾದ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆರ್ಗ ಗ್ರಾಮದ ಸರಕಾರಿ ನಿವೇಶನ ಸ್ಥಳದಲ್ಲಿ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸುಮಾರು 240 ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿ ವರ್ಷ 4 ಕಳೆದರೂ ಅವುಗಳು ಪೂರ್ಣ ಗೊಂಡು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರವಾಗಿಲ್ಲ. ಫಲಾನುಭವಿಗಳು ತಮ್ಮ ಪಾಲಿನ ಮಾರ್ಜಿನ್ ಹಣ 90,000 ರೂ.ವನ್ನು (ಪರಿಶಿಷ್ಟಜಾತಿ/ಪಂಗಡದವರಿಗೆ 60,000ರೂ.)ಪಾಲು ಹಣವಾಗಿ ಸಂಬಂಧಪಟ್ಟ ಇಲಾಖೆಗೆ ಕಟ್ಟಿದ್ದಾರೆ. ಬ್ಯಾಂಕ್‌ನ ಸಹಾಯ ಧನದೊಂದಿಗೆ ಸಾಲ ಸೌಲಭ್ಯ ಪಡೆದು ವಸತಿ ಸಮುಚ್ಚಯ ಕಟ್ಟಡಕ್ಕೆ ಹಕ್ಕುಪತ್ರ ಪಡೆಯಲಾ ಗಿದ್ದರೂ, ವಸತಿ ಸಮುಚ್ಛಯದ ಪಲಾನುಭವಿ ನಿವಾಸಿಗಳು ವಾಸ ಮಾಡಲು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ವಸತಿ ಸಮುಚ್ಛಯ ಅವ್ಯವಸ್ಥೆಗಳ ಆಗರವಾಗಿದೆ ಎಂಬುದು ಅವರ ದೂರಾಗಿದೆ.
ನಿವೇಶನ ರಹಿತರ ಸಮಸ್ಯೆಗಳ ಪರಿಹಾರಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂದವರು ದೂರಿದರು.
ಸಮಿತಿ ರಚನೆ: ನಿವೇಶನ ರಹಿತರು ಇದೀಗ ಸಂಘಟಿತರಾಗಿ ಸಮಿತಿಯೊಂದನ್ನು ರಚಿಸಿಕೊಂಡು ಹೋರಾಟಕ್ಕೆ ನಿರ್ಧರಿಸಿ ದ್ದಾರೆ. ಇದಕ್ಕಾಗಿ ಚನ್ನಪ್ಪ, ವೆಂಕಟೇಶ ಕೋಣಿ, ಸಂತೋಷ, ಸಂದೇಶ, ರಾಜಶೇಖರ, ಮಹಾವೀರ, ಸರಸ್ವತಿ, ಸೊನಾಲಿ, ನಾಗೇಶ ಪಿ.ಶೇಟ್, ವಿಶ್ವನಾಥ, ರಾಘವೇಂದ್ರ ಪಿ.ಶೇಟ್, ಕುಬೇರ, ಲಲಿತ ಗಂಗಯ್ಯ ಇವರನ್ನೊಳಗೊಂಡ 13 ಸದಸ್ಯರ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.