ಉಡುಪಿ: ಬೀಡಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ
ಉಡುಪಿ: ಬೀಡಿ ಕಾರ್ಮಿಕರಿಗೆ 2015-2018ರ ತನಕದ ತುಟ್ಟಿಭತ್ಯೆ ಪಾವತಿಸಲು ಮತ್ತು ಬೀಡಿ ಕಾರ್ಮಿಕರ ಮೂಲಭೂತ ಸಮಸ್ಯೆ ಬಗೆಹರಿಸಲು ಹಾಗೂ ಕನಿಷ್ಠ ವೇತನ ಜಾರಿಗಾಗಿ ಒತ್ತಾಯಿಸಿ ಬೀಡಿ ಟೋಬ್ಯಾಕೋ ಲೇಬರ್ ಯೂನಿಯನ್ ಉಡುಪಿ(ಸಿಐಟಿಯು) ಮತ್ತು ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಇಂದು ಉಡುಪಿ ತಾಲೂಕು ಕಛೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಬೀಡಿ ಫೆಡರೇಶನ್‌ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಧರಣಿ ಉದ್ಘಾಟಿಸಿ ಮಾತನಾಡಿದರು. ಬಳಿಕ ಧರಣಿ ನಿರತರು ತಹಶಿಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬೀಡಿ ಕಾರ್ಮಿಕರಿಗೆ ಬಾಕಿ ಹಣವನ್ನು ಬಡ್ಡಿ ಸಮೇತ ಪಾವತಿಸಲು ಕನಿಷ್ಠ ವೇತನ ಜಾರಿ ಮಾಡುವಂತೆ ಸರಕಾರವು ಮಾಲಕರಿಗೆ ಒತ್ತಾಯಿಸಬೇಕು. ಕನಿಷ್ಠ ವೇತನ ಕಾಯ್ದೆಯಂತೆ ಪ್ರತಿ 5 ವರ್ಷಕ್ಕೊಮ್ಮೆ ಹೊಸ ವೇತನ ನಿಗದಿಪಡಿಸುವುದು ಸರಕಾರದ ಕರ್ತವ್ಯವಾಗಿದ್ದು, ಆದುದರಿಂದ 1000 ಬೀಡಿಗೆ ಹೊಸ ವೇತನ 400ರೂ.ನಂತೆ ನಿಗದಿಗೊಳಿಸಿ, ಸರಕಾರ ಆದೇಶ ಮಾಡಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಬೀಡಿ ಟೋಬ್ಯಾಕೋ ಲೆಬರ್ ಯೂನಿ ಯನ್ ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಸುಂದರಿ, ಲಲಿತ, ನಿರ್ಮಲ, ವಸಂತಿ, ಇಂದ್ರ, ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷ ಶಾಂತ ನಾಯಕ್, ಕಾರ್ಯದರ್ಶಿ ಶಶಿಕಲಾ ಹಾಗೂ ಶಿವನಂದ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕಿಸ್, ಸಿಐಟಿಯು ಉಡುಪಿ ತಾಲೂಕು ಮುಖಂಡರಾದ ಮೋಹನ್, ರಂಗನಾಥ ಉಪಸ್ಥಿತರಿದ್ದರು.