ಉಡುಪಿ: ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭ
ಉಡುಪಿ, ಜು.19: ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ಫಲಾನುಭವಿಯ ನೋಂದಣಿ ಪ್ರಕ್ರಿಯೆಯು ಪ್ರಾರಂಭಗೊಂಡಿದೆ. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಿದ್ದು, ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿಸುತ್ತಿದ್ದಲ್ಲಿ ಅಂತಹವರು ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಫಲಾನುಭವಿಗಳು ಎರಡು ವಿಧಾನಗಳಲ್ಲಿ ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ರೇಷನ್ ಕಾರ್ಡಿನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಾವಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‌ಎಂಎಸ್ ಮೂಲಕ ಹಾಗೂ ಪ್ರಜಾಪ್ರತಿನಿಧಿ ಅಥವಾ ಸರಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೂಲಕವೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿರುವವರು ಕರ್ನಾಟಕ ಒನ್, ಬೆಂಗಳೂರು ಒನ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಫಲಾನುಭವಿಗಳು ನೋಂದಾವಣಿಗೆ ನಿಗದಿಪಡಿಸಲಾದ ದಿನ, ಸಮಯ ಮತ್ತು ಸ್ಥಳಗಳನ್ನು 1902 ಸಂಖ್ಯೆಗೆ ಕರೆ ಮಾಡಿ ಅಥವಾ ಮೊ.ನಂ: 8147500500 ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಕೂಡ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ನೋಂದಣಿಗೆ ನಿಗದಿಪಡಿಸಿದ ದಿನದಂದು ಸೇವಾ ಕೇಂದ್ರ ಗಳಿಗೆ ತೆರಳಲು ಸಾಧ್ಯವಾಗದಿದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನದಂದು ಸಂಜೆ 5ರಿಂದ 7ರ ಒಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್‌ಬುಕ್ (ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ, ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಪ್ರತಿಯೊಂದಿಗೆ ಫಲಾನುಭವಿಗಳು ಸೇವಾ ಕೇಂದ್ರಗಳಿಗೆ ತೆರಳಿ ನೋಂದಾ ಯಿಸಿಕೊಳ್ಳಬಹುದು.
ಸೇವಾ ಕೇಂದ್ರಗಳಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿ ಕೊಂಡವರಿಗೆ ತಮ್ಮ ಮನೆಗಳಿಗೆ ಮಂಜೂರಾತಿ ಪತ್ರವನ್ನು ತಲುಪಿಸ ಲಾಗುವುದು. ಈ ಕುರಿತು ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನಿಸಲಾಗುವುದು.
ಫಲಾನುಭವಿಯು ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಲ್ಲಿ ಆನಂತರ ಪ್ರಜಾಪ್ರತಿನಿಧಿ ಅವರ ಮನೆಗೆ ಭೀಟಿ ನೀಡಿ, ನೋಂದಾಯಿಸಲು ಪ್ರಯತ್ನಿಸಿದರೆ, ಈಗಾಗಲೇ ನೋಂದಾಯಿಸಿರುವ ಮಾಹಿತಿ ಲಭ್ಯವಾಗುತ್ತದೆ.
ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಮಾಹೆಯಾನ 2000 ರೂ.ಗಳನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುವುದು. ಫಲಾನುಭವಿಯು ಇಚ್ಛಿಸಿದ್ದಲ್ಲಿ ಪರ್ಯಾಯ ಬ್ಯಾಂಕ್ ಖಾತೆಯನ್ನು ನೀಡಬಹುದಾಗಿದ್ದು, ಸದರಿ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗುವುದು.
ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಪ್ರಕ್ರಿಯೆಯು ಉಚಿತವಾಗಿದ್ದು, ಯಾವುದೇ ಶುಲ್ಕವನ್ನು ಫಲಾನುಭವಿ ಪಾವತಿಸಬೇಕಾಗಿಲ್ಲ. ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.