ಉಡುಪಿ ತಾಲೂಕು ಕಚೇರಿ ಆವರಣದಲ್ಲಿ 2018ರ ವಿಧಾನಸಭಾ ಚುನಾವಣೆ ಫ್ಲೆಕ್ಸ್: ತೆರವಿಗೆ ಆಗ್ರಹ
ಉಡುಪಿ, ಎ.17: ಎರಡು ವಿಧಾನಸಭಾ ಚುನಾವಣೆ, ಒಂದು ಲೋಕಸಭಾ ಚುನಾವಣೆ ಮುಗಿದು ಇದೀಗ 2024ರ ಲೋಕಸಭಾ ಚುನಾವಣೆ ನಡೆಯು ತ್ತಿದ್ದರೂ ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಮಾತ್ರ 2018ರ ವಿಧಾನ ಸಭಾ ಚುನಾವಣೆಯ ಮತದಾನ ಜಾಗೃತಿಯ ಫ್ಲೆಕ್ಸ್ ರಾರಾಜಿಸುತ್ತಿದೆ.
2018, 2023ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯೂ ಮುಗಿದು ಇದೀಗ 2024ರ ಲೋಕಸಭಾ ಚುನಾವಣೆಯ ದಿನಗಣನೆಯಲ್ಲಿದ್ದೇವೆ. ಆದರೆ ಉಡುಪಿ ತಾಲೂಕು ಕಚೇರಿಯಲ್ಲಿ ಮಾತ್ರ 2018 ಮೇ 12ರ ವಿಧಾನಸಭೆ ಚುನಾವಣೆಯ ಫ್ಲೆಕ್ಸ್ ಕಂಡುಬರುತ್ತಿದೆ.
ಮತ ಚಲಾವಣೆ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸಿ ಎಂದು ಜಾಗೃತಿ ಮೂಡಿಸುವ ಈ ಬೃಹತ್ ಆಕಾರದ ಫ್ಲೆಕ್ಸ್ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಜನ ಓಡಾಡುವ ತಾಲೂಕು ಕಚೇರಿ ಸಮೀಪ ಬಾಕಿಯಾಗಿರುವ ಈ ಫ್ಲೆಕ್ಸ್‌ನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಇಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ಜಾಹೀರಾತಿನ ಫ್ಲೆಕ್ಸ್ ಇತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ತೆರವುಗೊಳಿಸಿರುವುದರಿಂದ ಅದರ ಅಡಿಯಲ್ಲಿದ್ದ ಈ ಹಳೆಯ ಚುನಾವಣಾ ಜಾಗೃತಿ ಮೂಡಿಸುವ ಫ್ಲೆಕ್ಸ್ ಬಾಕಿಯಾಗಿದೆ ಎಂದು ತಿಳಿದು ಬಂದಿದೆ.