ಉಡುಪಿ ಜಿಲ್ಲಾ ಪಂಚಾಯತ್‌ಗೆ ದೇಶದ ಸರ್ವೋತ್ತಮ ಜಿ.ಪಂನ ರಾಷ್ಟ್ರೀಯ ಪ್ರಶಸ್ತಿ
ಉಡುಪಿ: ದೇಶದ ಅತ್ಯುತ್ತಮ ಜಿಲ್ಲಾ ಪಂಚಾಯತ್‌ನ ರಾಷ್ಟ್ರೀಯ ನಾನಾಜಿ ದೇಶ್‌ಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ನಿನ್ನೆ ಹೊಸದಿಲ್ಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ-2024 ಸಮಾರಂಭದಲ್ಲಿ ಸಿಇಓ ಪ್ರತೀಕ್ ಬಾಯಲ್ ಹಾಗೂ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಂಸಾ ಪತ್ರಗಳೊಂದಿಗೆ ಎರಡು ಕೋಟಿ ರೂ. ಮೊತ್ತದ ಚೆಕ್‌ನ್ನು ಒಳಗೊಂಡಿದೆ. ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯು ರಾಷ್ಟ್ರೀಯ ಮಟ್ಟದ ವಿವಿಧ ಮಾನದಂಡಗಳ ಆಧಾರದಲ್ಲಿ ಉಡುಪಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಉಡುಪಿ ಜಿಲ್ಲಾ ಪಂಚಾಯತ್ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಒತ್ತು ನೀಡಿ ಶೇ.90ಕ್ಕೂ ಅಧಿಕ ತೆರಿಗೆ ವಸೂಲಿ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ, ಗುಣಮಟ್ಟ ಪರಿಶೀಲನೆ, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ, ಶಿಶು, ಗರ್ಭಿಣಿ ಮರಣ ಸಂಭವಿಸದಂತೆ ವಿಶೇಷ ನಿಗಾ, ಅಪೌಷ್ಠಿಕತೆ ನಿವಾರಣೆಗೆ ಕ್ರಮ, ಆನ್‌ಲೈನ್ ತೆರಿಗೆ ಪಾವತಿಗೆ ಕ್ರಮ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಕೋಚಿಂಗ್ ಮೂಲಕ ಎಸ್ಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅಗ್ರಸ್ಥಾನ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿ, ಸಂಜೀವಿನಿ ಸಂಘಗಳ ಮೂಲಕ ಹಡಿಲು ಭೂಮಿಯಲ್ಲಿ ಕೃಷಿ, ಗ್ರಾಮೀಣ ಭಾಗದಲ್ಲಿ ತ್ಯಾಜ್ಯಗಳ ನಿರ್ವಹಣೆಗೆ ಎಂಆರ್‌ಎಫ್ ಘಟಕ ಸ್ಥಾಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆ ತೋರಿದ ಉತ್ತಮ ಕಾರ್ಯ ಗಳಿಗಾಗಿ ಜಿಲ್ಲೆಗೆ ಈ ಪ್ರಶಸ್ತಿ ಬಂದಿದೆ.
ಇದರೊಂದಿಗೆ ಕೊಡಗು ಜಿಲ್ಲೆಯ ಗಾಳಿಬೀಡು ಗ್ರಾಮ ಪಂಚಾಯತ್‌ಗೆ ಗ್ರಾಪಂಗಳಿಗಿರುವ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ಒಂದು ಕೋಟಿ ರೂ. ಮೊತ್ತವನ್ನು ಸಹ ಹೊಂದಿದೆ. ಅಲ್ಲದೇ ಕಾರ್ಕಳ ತಾಲೂಕು ಸಾಣೂರು ಗ್ರಾಪಂ, ಕಾಪು ತಾಲೂಕಿನ ಕುರ್ಕಾಲು, ಇನ್ನಂಜೆ ಗ್ರಾಪಂಗಳ ಅಧ್ಯಕ್ಷರು, ಪಿಡಿಓಗಳೂ ಸಮಾರಂಭದಲ್ಲಿ ಭಾಗವಹಿಸಿದ್ದರು.