ಅಸಂಘಟಿತ ಕಾರ್ಮಿಕರು ಇ-ಶ್ರಮ್‌ನಲ್ಲಿ ತಪ್ಪದೇ ಹೆಸರು ನೊಂದಾಯಿಸಿ: ಉಡುಪಿ ಡಿಸಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ, ಆ.31: ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಭವಿಷ್ಯದಲ್ಲಿ ಪಡೆಯಲು ಜಿಲ್ಲೆಯ ಅಸಂಘಟಿತ ಕಾರ್ಮಿಕರು ತಪ್ಪದೇ ಇ-ಶ್ರಮ್‌ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಮಿಕ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವರ್ಗಗಳ ಕಾರ್ಮಿಕರುಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ, ಕಾರ್ಮಿಕರಿಗೆ ವಿಶೇಷ ನೀತಿಗಳು, ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಮಗ್ರ ದತ್ತಾಂಶವಿದ್ದಾಗ ಮಾತ್ರ ಸಾಧ್ಯ. ಅಲ್ಲದೇ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಇ-ಶ್ರಮ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
1.85 ಲಕ್ಷ ಮಂದಿ ನೊಂದಣಿ: ಜಿಲ್ಲೆಯಲ್ಲಿ ಇವರೆಗೆ 1,85,791 ಮಂದಿ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಉಳಿದವರು ಸಹ ನೋಂದಾಯಿಸಿ ಕೊಳ್ಳಬೇಕು. ಇ-ಶ್ರಮ್‌ನಲ್ಲಿ ನೋಂದಾಯಿಸಲು ಕಾರ್ಮಿಕರು ಆಧಾರ್ ಕಾರ್ಡ್‌ನೊಂದಿಗೆ ಬಂದು ತಮ್ಮ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯತೆಯ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆಯ ವಿವರ ನೀಡಿ ನೋಂದಾಯಿಸಿಕೊಳ್ಳಬಹುದು.
ಪಿಂಚಣಿ ಯೋಜನೆ: ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, 18-40 ವರ್ಷದೊಳಗಿನ ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಎಣ್ಣೆ ಗಿರಣಿ ಮಾಲಕರು, ವರ್ಕ್ ಶಾಪ್ ಮಾಲಕರು, ಕುಷನ್ ಎಜೆಂಟ್‌ಗಳು, ರಿಯಲ್ ಎಸ್ಟೇಟ್ ಬ್ರೋಕರ್‌ಗಳು, ಸಣ್ಣ ಹೋಟೆಲ್ ರೆಸ್ಟೋರೆಂಟ್‌ಗಳ ಮಾಲಕರು ಸೇರಿದಂತೆ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡ ಸ್ವಯಂ ಉದ್ಯೋಗಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.
ಸಮಾಜದ ಅನಿಷ್ಠ ಪದ್ಧತಿಯಾದ ಬಾಲಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಲ್ಲಿ ಹೋಗಲಾಡಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಬಾಲ ಕಾರ್ಮಿಕರುಗಳನ್ನು ನೇಮಿಸಿಕೊಂಡಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯ ವಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮಲ್ಪೆ ಹಾಗೂ ಗಂಗೊಳ್ಳಿಯ ಬಂದರುಗಳಲ್ಲಿ ಮಕ್ಕಳು ಮೀನನ್ನು ಆಯುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಆಗಿದ್ದಾಂಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿಗಳನ್ನು ಮಾಡಬೇಕು ಎಂದ ಜಿಲ್ಲಾಧಿಕಾರಿ, ಬಾಲಕಾರ್ಮಿಕರು ಒಂದೊಮ್ಮೆ ಸಿಕ್ಕಿದ್ದಲ್ಲಿ ಅವರುಗಳಿಗೆ ಪುನರ್‌ವಸತಿ ಕಲ್ಪಿಸುವುದರ ಜೊತೆಗೆ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು.
50,000ರೂ. ಸಾಲ: ಸರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಆತ್ಮನಿರ್ಭರ ಯೋಜನೆಯಡಿ 10,000 ರೂ. ಸಾಲವನ್ನು ಪ್ರಥಮ ಬಾರಿ ನೀಡಿದ್ದು, ಅವುಗಳನ್ನು ಹಿಂದಿರುಗಿಸಿದವರಿಗೆ 20,000 ರೂ.ವರೆಗೆ ಸಾಲ ವನ್ನು ನೀಡಲಾಗುತ್ತಿತ್ತು. ಇದು ಮುಂದುವರೆದು 20,000 ರೂ. ಸಾಲವನ್ನು ತೀರಿಸಿದವರಿಗೆ 50,000 ರೂ.ವರೆಗೆ ಸಾಲವನ್ನು ವಿತರಿಸಲಾ ಗುವುದು. ಇದರ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಇ-ಶ್ರಮ್‌ನಲ್ಲಿ ನೋಂದಾಯಿಸಲು ಇತರೆ ಇಲಾಖೆಗಳ ಸಹಯೋಗದೊಂದಿಗೆ ನೋಂದಣಿ ಶಿಬಿರಗಳನ್ನು ಏರ್ಪಡಿಸಿ, ಹೆಚ್ಚಿನ ನೋಂದಣಿ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ವರ್ಗದ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.