‘ವಾರ್ತಾಭಾರತಿ’ಯ ಅಂಕಣಕಾರ ಸನತ್ ಕುಮಾರ್ ಬೆಳಗಲಿ, ಲಾರೆನ್ಸ್ ಕುವೆಲ್ಹೋರಿಗೆ ಕೆ.ಟಿ.ವಿ-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ
ಸನತ್ ಕುಮಾರ್ ಬೆಳಗಲಿ, ಲಾರೆನ್ಸ್ ಕುವೆಲ್ಹೋ
ಉಡುಪಿ, ಜು.27: ಹಿರಿಯ ಪತ್ರಕರ್ತ ಹಾಗೂ ‘ವಾರ್ತಾಭಾರತಿ’ಯ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಹಾಗೂ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೆನ್ಸ್ ಕುವೆಲ್ಙೋ ಅವರನ್ನು ವಾರ್ಷಿಕ ಕೆ.ಟಿ. ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆ ಕೊಡಮಾಡುವ ಕೆ.ಟಿ. ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀಯ 2022ನೇ ಸಾಲಿನ ನಾಲ್ಕನೇ ಪ್ರಶಸ್ತಿಗೆ ಮುಂಬೈಯ ಲಾರೆನ್ಸ್ ಕುವೆಲ್ಹೋ ಆಯ್ಕೆಯಾದರೆ, 2023ನೇ ಸಾಲಿನ ಐದನೇ ವರ್ಷದ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಾವಳಗಿ ಮೂಲದ ಸನತ್ ಕುಮಾರ ಬೆಳಗಲಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷೆ ಡಾ. ಸುನೀತಾ ಎಂ.ಶೆಟ್ಟಿ ಮತ್ತು ತೀರ್ಪುಗಾರರಾದ ಸಾ.ದಯಾ ಮತ್ತು ಗೋಪಾಲ ತ್ರಾಸಿ ಇವರು ಆಯ್ಕೆ ಮಾಡಿದಂತೆ ಲಾರೆನ್ಸ್ ಕುವೆಲ್ಹೋ ಹಾಗೂ ಬೆಳಗಲಿ ಇವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ದಿ.ಕೆ.ಟಿ.ವೇಣುಗೋಪಾಲ್ರ ಪುತ್ರ ವಿಕಾಸ್ ವೇಣುಗೋಪಾಲ್ ಪರಿವಾರದ ಸಹಕಾರ ಮತ್ತು ಕಪಸಮ ಸಂಘದ ಪ್ರಶಸ್ತಿನಿಧಿಯೊಂದಿಗೆ ಈ ಪ್ರಶಸ್ತಿಯು 25,000ರೂ. ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಪ್ರಥಮ ವರ್ಷದ (2019)ದ ಕೆ.ಟಿ.ವೇಣುಗೋಪಾಲ ಪ್ರಶಸ್ತಿಯನ್ನು ಮುಂಬೈಯ ಹಿರಿಯ ಪತ್ರಕರ್ತ ನ್ಯಾ.ವಸಂತ ಕಲಕೋಟಿ ಇವರಿಗೆ ದ್ವಿತೀಯ ಪ್ರಶಸ್ತಿಯನ್ನು (2020) ಮುಂಬೈಯ ಹಿರಿಯ ಪತ್ರಕರ್ತ ಜಿ.ಕೆ ರಮೇಶ್ ಹಾಗೂ ತೃತೀಯ ಪ್ರಶಸ್ತಿ (2021)ಯನ್ನು ಕಾಸರಗೋಡಿನ ಪತ್ರಕರ್ತ ಅಚ್ಯುತ ಎಂ.ಚೇವ್ಹಾರ್ ಇವರಿಗೆ ನೀಡಲಾಗಿತ್ತು.
ಆಗಸ್ಟ್ 6ರಂದು ರವಿವಾರ ಬೆಳಗ್ಗೆ ಪೂರ್ವ ಮುಂಬೈ ಅಂಧೇರಿಯ ಸಾಲಿಟರಿ ಕಾರ್ಪೋರೆಟ್ ಪಾರ್ಕ್ನ ಲೋಟಸ್ ಸಭಾಗೃಹದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ (ದಯಾನಂದ್) ಮತ್ತು ಜೊತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.