ವಿಡಿಯೋ ಚಿತ್ರೀಕರಣ ವಿವಾದ: ಬಿಜೆಪಿ ಪ್ರತಿಭಟನೆ
ಉಡುಪಿ, ಜು.28: ನಗರದ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆನ್ನಲಾದ ಘಟನೆಯನ್ನು ಖಂಡಿಸಿ ಹಾಗೂ ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಬಹೃತ್ ಪ್ರತಿಭಟನೆ ನಡೆಯಿತು
ನಗರದ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಬಿಜೆಪಿ ಕಾರ್ಯಕರ್ತರು ಬನ್ನಂಜೆ ಯಲ್ಲಿರುವ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಕಚೇರಿ ಸುತ್ತಮುತ್ತ ಹಾಗೂ ಮೆರವಣಿಗೆ ಸಾಗುವ ರಸ್ತೆಯುದ್ಧಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬಿಜೆಪಿ ಕಾರ್ಯಕರ್ತರು ಬನ್ನಂಜೆಯ ಎಸ್ಪಿ ಕಚೇರಿ ಮುಂದೆ ಜಮಾಯಿಸಿ ರಾಜ್ಯಸರಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸೇರಿ ಜಿಲ್ಲಾ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದರು.
ತನಿಖೆಯನ್ನು ಎನ್‌ಐಎಗೆ ಒಪ್ಪಿಸಿ: ಎಸ್ಪಿ ಕಚೇರಿ ಮುಂದೆ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಕಾಲೇಜಿನ ಶೌಚಾಲಯದಲ್ಲಿ ನಡೆದ ಮೊಬೈಲ್ ಶೂಟಿಂಗ್ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಈ ವಿಷಯದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದರು.
ಇಂತಹ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಮುಂದೆ ಉಗ್ರ ಹೋರಾ ಟಕ್ಕೂ ಸಿದ್ಧರಿದ್ದೇವೆ ಎಂದು ಗಂಟಿಹೊಳೆ ಎಚ್ಚರಿಸಿದರು. ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ವೀಣಾ ಶೆಟ್ಟಿ ಮಾತನಾಡಿದರು.
ಕೊನೆಯಲ್ಲಿ ಪಕ್ಷದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರರಿಗೆ ಮನವಿ ಪತ್ರವೊಂದನ್ನು ಅರ್ಪಿಸಿ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸುವ ಮೂಲಕ ಜಿಲ್ಲೆಯ ಹಿರಿಮೆಗೆ ಅಂಟಿರುವ ಕಳಂಕವನ್ನು ನಿವಾರಿಸುವಂತೆ ವಿನಂತಿಸಲಾಗಿದೆ.
ಇದೇ ವೇಳೆ ಪಶ್ಚಿಮ ವಲಯ ಐಜಿಪಿ ಅವರು ಇಂದು ಉಡುಪಿ ಎಸ್ಪಿ ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತಂತೆ ಅಕ್ಷಯ ಹಾಕೆ ಹಾಗೂ ತನಿಖಾಧಿ ಕಾರಿ ಮಂಜುನಾಥ ಗೌಡ ಅವರಿಂದ ವಿವರಗಳನ್ನು ಪಡೆದಿದ್ದು, ಮುಂದಿನ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆಂದು ತಿಳಿದುಬಂದಿದೆ.
ಮೆರವಣಿಗೆ ಸಾಗುವ ದಾರಿಯಲ್ಲಿ ಹಾಗೂ ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ 500ಕ್ಕೂ ಅಧಿಕ ಜಿಲ್ಲಾ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಗೃಹ ಸಚಿವರನ್ನು ಛೇಡಿಸಿದ ಯಶ್ಪಾಲ್
ತಮ್ಮ ಮಾತಿನ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಗೃಹ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ, ಅವರ ಪ್ರಕಾರ ವಿದ್ಯಾರ್ಥಿನಿಯರು ಮಾಡಿರುವುದು ಮಕ್ಕಳಾಟಿಕೆ. ಆದರೆ ಶೌಚಾಲಯದಲ್ಲಿ ಶೂಟಿಂಗ್ ಮಾಡಿರುವುದು ಮಕ್ಕಳಾಟಿಕೆಯಲ್ಲ. ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಮಕ್ಕಳಾಟಿಕೆಯಾಗಿರಬಹುದು. ಆದರೆ ಇದು ತಮಾಷೆಯ ವಿಷಯ ಅಲ್ಲ ಎಂದು ಛೇಡಿಸಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಬ್ಬರೂ ಕುರುಡ ಮತ್ತು ಕಿವುಡರಂತಿದ್ದಾರೆ. ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗಗೊಳ್ಳಬೇಕು ಎಂದರು.