ವಿಧಾನ ಪರಿಷತ್ ಉಪ ಚುನಾವಣೆ: ಮತದಾನ ಆರಂಭ
ಮಂಗಳೂರು/ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಉಪ ಚುನಾವಣೆ ಇಂದು ಬೆಳಗ್ಗೆ 8ಕ್ಕೆ ಆರಂಭಗೊಂಡಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಈ ಕ್ಷೇತ್ರದ 392 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಮನಪಾ ಕಾರ್ಪೊರೇಟರ್ ಗಳು ಮತ ಚಲಾಯಿಸಿದರು.
ಉಡುಪಿ ಜಿಲ್ಲೆಯಲ್ಲಿ ನಿಧನಗತಿಯಲ್ಲಿ ಮತದಾನ ಆರಂಭಗೊಂಡಿದೆ. ಉಡುಪಿ ನಗರಸಭೆಯ ಮತಗಟ್ಟೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಬೆಳಗ್ಗೆ ಹಕ್ಕು ಚಲಾವಣೆ ಮಾಡಿದರು. ನಗರಸಭೆಯು ಅಧ್ಯಕ್ಷ ಪ್ರಭಾಕರ್ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ ಕಲ್ಮಾಡಿ ಹಾಗೂ ನಗರಸಭೆಯ ಕೆಲವು ಸದಸ್ಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಅದೇರೀತಿ ಕಾರ್ಕಳ ಪುರಸಭೆಯಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಮತದಾನ ಮಾಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾಪು ಪುರಸಭೆಗೆ ತೆರಳಿ ಮತ ಚಲಾಯಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ 6,032 ಜನಪ್ರತಿನಿಧಿಗಳು ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ. ಈ ಪೈಕಿ ದ.ಕ. ಜಿಲ್ಲೆಯ 223 ಗ್ರಾಪಂಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 65, ಉಳ್ಳಾಲ ಮತ್ತು ಪುತ್ತೂರು ನಗರ ಸಭೆಯ 64, ಮೂಡುಬಿದಿರೆ, ಬಂಟ್ವಾಳ, ಸೋಮೇಶ್ವರ ಪುರಸಭೆಯ 74, ಮುಲ್ಕಿ, ಬೆಳ್ತಂಗಡಿ, ಕಡಬ, ವಿಟ್ಲ, ಕೋಟೆಕಾರ್ ಪಟ್ಟಣ ಪಂಚಾಯತ್ನ 86 ಮಂದಿ ಹಾಗೂ ಉಡುಪಿ ಜಿಲ್ಲೆಯ 153 ಗ್ರಾಪಂಗಳ 2,355 ಸದಸ್ಯರು, ಉಡುಪಿ ನಗರಸಭೆಯ 36, ಮೂರು ಪುರಸಭೆಗಳ 72, ಒಂದು ನಗರ ಪಂಚಾಯತ್ನ 17 ಮಂದಿ ಸೇರಿದ್ದಾರೆ. ಅಲ್ಲದೆ ಸಂಸದರು, ಶಾಸಕರೂ ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ.
ದ.ಕ. ಜಿಲ್ಲೆಯ 234 ಮತಗಟ್ಟೆಯಲ್ಲಿ 1,710 ಪುರುಷರು ಮತ್ತು 1,842 ಮಹಿಳೆಯರ ಸಹಿತ 3,552 ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಯಲ್ಲಿ 1,195 ಪುರುಷರು ಮತ್ತು 1,285 ಮಹಿಳೆಯರ ಸಹಿತ 2,480 ಮತದಾರರಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಮತ್ತು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 540 ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 328 ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಿಶೋರ್ ಬಿ.ಆರ್. (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದಾತ್ ಎಸ್. (ಎಸ್ಡಿಪಿಐ), ದಿನಕರ ಉಳ್ಳಾಲ (ಪಕ್ಷೇತರ) ಚುನಾವಣಾ ಕಣದಲ್ಲಿದ್ದಾರೆ.
ಅ.24ರಂದು ನಗರದ ಸಂತ ಅಲೋಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಯು ನಡೆಯಲಿದೆ.