ಸಂಘಟಿತ ಹೋರಾಟದಿಂದ ಪಂಚಾಯತ್‌ರಾಜ್ ವ್ಯವಸ್ಥೆಗೆ ಬಲ: ಸಂಸದ ಕೋಟ
ಸ್ಥಳೀಯ ಸರಕಾರದ ಉಳಿವಿಗಾಗಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಪ್ರತಿಭಟನೆ

ಉಡುಪಿ: ಸ್ಥಳೀಯ ಸರಕಾರದ ಉಳಿವಿಗಾಗಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ಸರಕಾರ ಹೊರಡಿಸುವ ಸುತ್ತೋಲೆ, ಆದೇಶಗಳು ಪಂಚಾಯತ್ ರಾಜ್ ವ್ಯವಸ್ಥೆಯ ಒಂದೊಂದೇ ಕಲ್ಲುಗಳನ್ನು ಬೀಳಿಸುತ್ತಿದೆ. ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಸಂಘಟಿತ ಹೋರಾಟ ಮಾತ್ರ ಇಂದು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಸಾಧ್ಯ. ಪಂಚಾಯತ್‌ರಾಜ್ ವ್ಯವಸ್ಥೆ ಬಲಗೊಳ್ಳಬೇಕಾದರೆ, ಸ್ಥಳೀಯವಾಗಿ ಗ್ರಾಮ ಸರಕಾರಗಳು ಬಲವಾಗಬೇಕು ಎಂದರು.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸ್ಥಳೀಯ ಸ್ವಯಂ ಸರಕಾರವನ್ನು ಉಳಿಸಲು ಮತ್ತು ಬಲಪಡಿಸಲು ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯ ಪ್ರವತ್ತರಾಗಬೇಕು. ಹಿಂದಿನಿಂದಲೂ ಹಲವಾರು ರೀತಿಯಲ್ಲಿ ವಿವಿಧ ಹಂತದ ಸರಕಾರಗಳಿಂದ ನಿರಂತರವಾಗಿ ಗ್ರಾಮ ಸರಕಾರಗಳ ಅಧಿಕಾರಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಈ ಎಲ್ಲಾ ಹಕ್ಕೊತ್ತಾಯಗಳನ್ನು ನೇರವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರನ್ನು ಹಾಗೂ ವಿಧಾನ ಪರಿಷತ್‌ಗೆ ಸ್ಥಳೀಯಾಡಳಿತದಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ನಮ್ಮ ಒಕ್ಕೂಟದ ನಿಯೋಗವು ಭೇಟಿ ಮಾಡಿ ಚರ್ಚಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು. ಜೊತೆಗೆ ಗ್ರಾಪಂಗೆ ಸಂಬಂಧಿಸಿದಂತೆ ಸಿಬ್ಬಂದಿಗಳ ನೇಮಕಾತಿ ಮತ್ತು ಏಕ ವಿನ್ಯಾಸ ನಕ್ಷೆಯಲ್ಲಿ ಇರುವ ಗೊಂದಲಗಳ ಕುರಿತಾಗಿ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲು ಒಕ್ಕೂಟ ನಿರ್ಧರಿಸಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರ ಮೂಲಕ ಹಕ್ಕೊತ್ತಾಯಗಳ ಮನವಿಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ಗ್ರಾಪಂಗಳ ಪ್ರತಿನಿಧಿಗಳಾದ ಬಿ.ದಿನಕರ ಶೆಟ್ಟಿ ಬಸ್ರೂರು, ಬಸವ ಪಿ.ಮೊಗವೀರ ಹಕ್ಲಾಡಿ, ಎಚ್.ಪ್ರಕಾಶ್ ಶೆಟ್ಟಿ ಯಡ್ತಾಡಿ, ಇಂದಿರಾ ಶೆಟ್ಟಿ ಮೊಳಹಳ್ಳಿ, ಚಂದ್ರಿಕಾ ಮೊಳಹಳ್ಳಿ, ಮೋಹನ್‌ಚಂದ್ರ ಉಪ್ಪುಂದ, ರಮೇಶ್ ಶೆಟ್ಟಿ ಕಾಳಾವರ, ಜಿ.ಮಂಜುನಾಥ್ ಹಟ್ಟಿಯಂಗಡಿ, ಉದಯಕುಮಾರ್ ತಲ್ಲೂರು ಮೊದಲಾದವರು, ತಾವು ಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿಟ್ಟು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಉಡುಪಿ ಜಿಲ್ಲೆಯ ಕುಂದಾಫುರ, ಬೈಂದೂರು, ಉಡುಪಿ, ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳ ಗ್ರಾಮ ಪಂಚಾಯತ್‌ಗಳಿಂದ ಸುಮಾರು ೩೦೦ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಲಯದ ಸದಸ್ಯ ಶ್ರೀನಿವಾಸ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಕೃಪಾ ಎಂ. ಗ್ರಾಮಸಭೆ ಮತ್ತು ಸ್ಥಳೀಯ ಸರಕಾರದ ಹಕ್ಕು ಮತ್ತು ಅಧಿಕಾರದ ಬಗ್ಗೆ ಚರ್ಚಿಸಿದರು.