ಮಹಿಳಾ ದೌರ್ಜನ್ಯ: ಕೋಟ ಎಸ್ಸೈ ವಜಾಕ್ಕೆ ಗೃಹ ಸಚಿವರಿಗೆ ಮನವಿ
ಉಡುಪಿ: ಕೋಟ ಪೊಲೀಸ್ ಠಾಣೆಯ ಕ್ರೈಮ್ ವಿಭಾಗದ ಎಸ್ಸೈ ಸುಧಾ ಪ್ರಭು ಅಮಾಯಕ ಮಹಿಳೆಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಿಯೋಗ ರವಿವಾರ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಉಡುಪಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ಸುಳ್ಳು ಕಳ್ಳತನ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಎಸ್ಸೈ ಸುಧಾ ವಿರುದ್ಧ ಇಲಾಖೆ ಕ್ರಮ ಜರಗಿಸುವಂತೆ ಎಸ್ಪಿಯವರಿಗೆ ಈ ಹಿಂದೆ ಮನವಿ ಸಲ್ಲಿಸಿತು. ಆದರೆ ಈವರೆಗೆ ಎಸ್ಸೈ ವಿರುದ್ಧ ಯಾವುದೇ ಕ್ರಮ ಜರಗಿ ಸಿಲ್ಲ. ದೂರು ನೀಡಿದ ನಮ್ಮ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಪೊಲೀಸರು ನೋಟೀಸ್ ನೀಡಿ ಬೆದರಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಆದುದರಿಂದ ತಾವು ಈ ಕೂಡಲೇ ಕ್ರಮ ವಹಿಸಿ ತಪ್ಪಿತಸ್ಥರ ಎಸ್ಸೈಯನ್ನು ಕರ್ತವ್ಯ ದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಉಗ್ರ ರೀತಿಯ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಯೋಗ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಮುಖಂಡರಾದ ಸುಂದರ ಮಾಸ್ತರ್, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ರಾಜು ಬೆಟ್ಟಿನಮನೆ, ಮಂಜುನಾಥ ಹಳಗೇರಿ, ಭಾಸ್ಕರ ಕೆರ್ಗಾಲ್, ಭಾಸ್ಕರ ಮಾಸ್ತರ್, ಶಿವಾನಂದ ಮೂಡಬೆಟ್ಟು, ಶ್ರೀನಿವಾಸ ವಡ್ಡರ್ಸೆ, ಗೋವಿಂದ ಹಳಗೆರಿ, ವಿಜಯ ಗಿಳಿಯಾರು, ಶಿವರಾಮ ಹಳಗೆರಿ, ವಿಠಲ ಉಚ್ಚಿಲ, ಶಿವರಾಮ ಕಾಪು, ರಮೇಶ್ ಪಾಲನ್, ಗಣೇಶ್ ನೆರ್ಗಿ, ಸುರೇಶ ಹಕ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.