ಮಹಿಳಾ ದೌರ್ಜನ್ಯ: ಕೋಟ ಎಸ್ಸೈ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಕೋಟ: ಕೂಲಿ ಕಾರ್ಮಿಕರಾದ ಆಶಾ ಮತ್ತು ಸುಜಾತ ಎಂಬವರ ಮೇಲೆ ದೌರ್ಜನ್ಯ ಎಸಗಿರುವ ಕೋಟ ಪೊಲೀಸ್ ಠಾಣೆಯ ಎಸ್ಸೈ ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಶನಿವಾರ ಕೋಟ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಕೂಲಿ ಕಾರ್ಮಿಕ ಮಹಿಳೆಯರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗ ಣಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರುದಾರರಿಗೂ ಪೂರಕ ಸ್ಪಂದನೆ ನೀಡಿಲ್ಲ. ಎಸ್ಸೈ ರಕ್ಷಿಸುವ ಸಲುವಾಗಿ ಹೋರಾಟಗಾರರಿಗೆ ನೋಟೀಸು ನೀಡುವ, ಪ್ರತಿಭಟನೆ ಹತ್ತಿಕ್ಕುವ ಯತ್ನ ಮಾಡಿದ್ದಾರೆ ಎಂದು ದೂರಿದರು.
ಇದರ ಹಿಂದೆ ರಾಜಕೀಯ ಷಡ್ಯಂತ್ರ ಕೂಡ ಮೇಲ್ನೋಟಕ್ಕೆ ಕಾಣುತ್ತಿದೆ. ಸಂತ್ರಸ್ತರ ತೇಜೋವಧೆ ನಡೆದಿದೆ. ಶೀಘ್ರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ನ್ಯಾಯ ಒದಗಿಸಿಕೊಡದಿದ್ದಲ್ಲಿ ಮುಂದಿನ ದಿನದಲ್ಲಿ ಎಸ್ಪಿವಿರುದ್ಧ ಅವರ ಕಚೇರಿ ಎದುರು ಹೋರಾಟ ನಡೆಸಲಾಗುವುದು.ಅಲ್ಲದೆ ಉಸ್ತುವಾರಿ ಸಚಿವರ ಸಹಿತ ಸರಕಾರ ಪ್ರತಿನಿಧಿಗಳು ಜಿಲ್ಲೆಗೆ ಬಂದಾಗ ಘೇರಾವ್ ಹಾಕುವುದು, ಕಪ್ಪುಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಕೋಟ ಠಾಣೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದಸಂಸ ಮುಂದೆ ಬಂದಿದೆ. ನಮ್ಮ ದಸಂಸ ಹೋರಾಟದ ಶಕ್ತಿ ಪೊಲೀಸ್ ಮೇಲಾಧಿಕಾರಿಗಳಿಗೆ ತೋರಿಸುವ ಕೆಲಸ ಕಾನೂನಾತ್ಮಕವಾಗಿ ಹಾಗೂ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಹೋರಾಟ ಹಮ್ಮಿಕೊಳ್ಳ ಲಾಗುತ್ತದೆ. ಜನವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಶೀಘ್ರ ಆಗಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಉಡುಪಿ ಜಿಲ್ಲಾ ದಸಂಸ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ, ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕಿಷ್, ಸಾಲಿಗ್ರಾಮ ಘಟಕಾಧ್ಯಕ್ಷೆ ಶಾರದಾ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಮುಖಂಡರಾದ ನಾಗರಾಜ್ ಉಪ್ಪುಂದ, ಶ್ರಿನಿವಾಸ ವಡ್ಡರ್ಸೆ, ವಿಠ್ಠಲ್, ದೇವಣ್ಣ ಹೆಬ್ರಿ, ವಿನಯಾ ಮಾಸ್ತಿಕಟ್ಟೆ, ನಾಗರಾಜ ಪಡುಕೆರೆ, ಸುರೇಶ್ ಹಕ್ಲಾಡಿ, ಗೋಪಾಲಕೃಷ್ಣ ನಾಡ, ವಿಜಯ ಗಿಳಿಯಾರು, ಗೋವಿಂದ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಪ್ರತಿಭಟನಕಾರರು ಬ್ರಹ್ಮಾವರ ವೃತ್ತನಿರೀಕ್ಷಕ ಪಿ.ಎಂ.ದಿವಾಕರ್ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜೊತೆಗೆ, ಸಿ.ಐ.ಟಿ.ಯು.ಹಾಗೂ ಜನವಾದಿ ಮಹಿಳಾ ಸಂಘಟನೆ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಖಾಕಿ ಬಟ್ಟೆ ಹಾಕಿ ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದ್ದು ದೌರ್ಭಾಗ್ಯ. ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಮಹಿಳೆಯರ ಅಂತಕರಣ ಅರ್ಥಮಾಡಿಕೊಳ್ಳಲಾಗದ, ಬಂಡವಾಳ ಶಾಹಿಗಳ ಬಾಡಿಗೆ ಗೂಂಡಾಗಳಂತೆ ವರ್ತಿಸುವ ಮಹಿಳಾ ಅಧಿಕಾರಿ ಪೊಲೀಸ್ ಇಲಾಖೆಗೆ ನಾಲಾಯಕ್. ಇಂತವರನ್ನು ಮೇಲಾಧಿಕಾರಿಗಳು ತಕ್ಷಣ ವಜಾ ಮಾಡಬೇಕು. ಹಿರಿಯ ಅಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಕರ್ತವ್ಯಪ್ರಜ್ಞೆ ಮೆರೆಯಬೇಕು’
-ವಾಸುದೇವ ಮುದೂರು, ಜಿಲ್ಲಾ ಸಂಘಟನಾ ಸಂಚಾಲಕರು, ದಸಂಸ