ಪತ್ನಿಯ ಕೊಲೆ ಪ್ರಕರಣ: ಆರೋಪಿ ಪತಿಗೆ ನ್ಯಾಯಾಂಗ ಬಂಧನ
ಕೋಟ, ಆ.26: ಸಾಲಿಗ್ರಾಮ ಸಮೀಪದ ಕಾರ್ಕಡ ಎಂಬಲ್ಲಿ ಆ.22ರಂದು ಪತ್ನಿಯನ್ನು ಕೊಲೆಗೈದ ಆರೋಪಿ ಪತಿ ಕಿರಣ್ ಉಪಾಧ್ಯಾಯ(44)ನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬೀದರ್ ಜಿಲ್ಲೆಯ ದೊಣಗಪುರ ಮೂಲದ ಜಯಶ್ರೀ(31) ಅವರನ್ನು ಕೊಲೆಗೈದ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯಾಯನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದರು. ಆದರೆ ಆರೋಪಿ ಕೊಲೆ ಕೃತ್ಯದ ಬಳಿಕ ಇದೊಂದು ಆಕಸ್ಮಿಕ ಸಾವು ಎಂಬಂತೆ ನಾಟಕವಾಡಿ ಕೊಲೆಯ ಸಾಕ್ಷ್ಯ ನಾಶಕ್ಕೆ ಮುಂದಾಗಿರುವುದು ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಹೆಚ್ಚಿನ ತನಿಖೆಗೆ ಕಸ್ಟಡಿಗೆ ಪಡೆದಿದ್ದರು. ತನಿಖೆಯ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರು ಪೊಲೀಸರು, ಆರೋಪಿಯಿಂಗದ ಬಟ್ಟೆ, ಮೊಬೈಲ್, ದ್ವಿಚಕ್ರ ವಾಹನ ಮೊದಲಾದವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಪತ್ನಿಯನ್ನು ಕೊಲೆಗೈದ ಬಳಿಕ ಮೃತದೇಹವನ್ನು ತಾನಿದ್ದ ಬಾಡಿಗೆ ಮನೆಯಿಂದ ಅನತಿ ದೂರದಲ್ಲಿರುವ ಗೊಬ್ಬರದ ಗುಂಡಿಯಂತಿರುವ ಪುಟ್ಟ ಕೆರೆಗೆ ಹಾಕಿ ಸಾಕ್ಷ್ಯ ನಾಶ ಮಾಡಲು ಮುಂದಾಗಿದ್ದನು ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೃತದೇಹವನ್ನು ಮೇಲಂತಸ್ತಿನ ಕೊಠಡಿಯಿಂದ ಕೆಳಕ್ಕೆ ತಂದು ತನ್ನ ದ್ವಿಚಕ್ರ ವಾಹನದಲ್ಲಿ ಹಾಕಿ ಒಯ್ಯುವ ಯತ್ನ ನಡೆಸಿದ್ದು ಅದು ಸಾಧ್ಯವಾಗದ ಕಾರಣ ಪತ್ನಿ ಮಹಡಿ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ ಎಂದು ನಂಬಿಸುವ ಯತ್ನವನ್ನು ಆರೋಪಿ ಮಾಡಿದ್ದ ಎನ್ನಲಾಗಿದೆ.