ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ: ಡಿಸಿಎಂ ಡಿಕೆಶಿ
"ನಬಾರ್ಡ್ ಸಾಲ ಕಡಿತ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ಜೊತೆ ಸಿಎಂ ಮಾತುಕತೆ"
ಕೊಲ್ಲೂರು: ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಸರಕಾರ ಮತ್ತು ನಮ್ಮ ಪಕ್ಷ ರಾಜ್ಯದ ಜನತೆಗೆ ಅನ್ಯಾಯ ಮಾಡುವುದಿಲ್ಲ. ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಎಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಲ್ಲೂರಿನಲ್ಲಿ ಇಂದು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ- ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ವಿವಾದದ ಕುರಿತು ಪ್ರಶ್ನಿಸಿದಾಗ, ನಾನು ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಸರಕಾರದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ, ಉಪ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ.... ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಐದು ಗ್ಯಾರಂಟಿ ಜಾರಿ ನೋಡಿಕೊಳ್ಳಲು ತಾಲೂಕು ಸಮಿತಿಗಳಿವೆ. ರಾಜ್ಯಮಟ್ಟದ ಸಮಿತಿ ಕೂಡ ಇದೆ. ಸಮಿತಿ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಅದು ಎಲ್ಲರಿಗೂ ನ್ಯಾಯ ಕೊಡುತ್ತದೆ. ಯಾರು ಭಯಪಡಬೇಕಾಗಿಲ್ಲ ಎಂದರು.
ವಿರೋಧ ಪಕ್ಷಗಳು ಏನಾದರೂ ಮಾತನಾಡಬೇಕಲ್ಲ, ಎಂದು ಮಾತನಾಡುತ್ತಿವೆ ಎಂದು ಡಿಸಿಎಂ ಲೇವಡಿ ಮಾಡಿದರು.
"ನಬಾರ್ಡ್ ಸಾಲ ಕಡಿತ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ಜೊತೆ ಸಿಎಂ ಮಾತುಕತೆ"
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೊಸದಿಲ್ಲಿಗೆ ತೆರಳಿದ್ದು, ರಾಜ್ಯಕ್ಕೆ ನಬಾರ್ಡ್ ಸಾಲದಲ್ಲಿ ಮಾಡಿರುವ ಶೇ.58ರಷ್ಟು ಕಡಿತದ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಂದಿನಿ ಹಾಲಿನ ಮಾರ್ಕೆಟ್ ಮಾಡಲು ಸಿಎಂ ದಿಲ್ಲಿಗೆ ಹೋಗಿದ್ದು, ಕೇಂದ್ರ ವಿತ್ತ ಸಚಿವೆಯ ಭೇಟಿಗೆ ಸಮಯ ಕೇಳಿದ್ದಾರೆ. ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ನ್ಯಾಯ ಒದಗಿಸಿಕೊಡಬೇಕು ಎಂದು ಕೇಳುತ್ತಾರೆ ಎಂದರು.
ಗ್ಯಾರಂಟಿ ಯೋಜನೆ ಇನ್ನೂ 10 ವರ್ಷ ಇರುತ್ತದೆ
ಗ್ಯಾರಂಟಿ ಯೋಜನೆಗಳನ್ನು ಕೈ ಬಿಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಇನ್ನು ಗ್ಯಾರಂಟಿ 10 ವರ್ಷಗಳ ಕಾಲ ಇರುತ್ತವೆ, ಇನ್ನುಳಿದ ಮೂರು ವರ್ಷ ಸೇರಿ ಒಟ್ಟು ಎಂಟು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದರು.
ಎನ್ ಕೌಂಟರ್: ಪೊಲೀಸರು ಅವರ ಕೆಲಸ ಮಾಡಿದ್ದಾರೆ
ಶಂಕಿತ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಪೊಲೀಸರು ಅವರ ಕೆಲಸವನ್ನು ಮಾಡುತ್ತಾರೆ. ಗೃಹ ಸಚಿವ ಪರಮೇಶ್ವರ್ ಅವರ ಕೆಲಸ ಮಾಡ್ತಾರೆ. ನಾನು ರಾಜ್ಯದಲ್ಲಿ ನನ್ನ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದ ಜನರನ್ನು ರಕ್ಷಣೆ ಮಾಡೋದು ನಮ್ಮೆಲ್ಲರ ಕೆಲಸ. ಅದನ್ನು ನಾವು ಮಾಡುತ್ತಿದ್ದೇವೆ. ಕೇರಳ, ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಎಲ್ಲ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.