ಗಾಳಿ-ಮಳೆ: ಉಡುಪಿ ಜಿಲ್ಲೆಯಲ್ಲಿ 8 ಮನೆಗಳಿಗೆ ಹಾನಿ
ಉಡುಪಿ, ಜು.20: ಜಿಲ್ಲೆಯಲ್ಲಿ ಸುರಿದ ಗಾಳಿ-ಮಳೆಯ ಪರಿಣಾಮ ವಿವಿದೆಡೆಗಳಲ್ಲಿ ಎಂಟು ಮನೆಗಳಿಗೆ ಹಾನಿಯಾಗಿದ್ದು, ಅಂದಾಜು ಮೂರು ಲಕ್ಷರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಕಾವೇರಿ ಮರಾಠಿ ಎಂಬವರ ವಾಸದ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು ಒಂದೂವರೆ ಲಕ್ಷರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಯಳಜಿತ್ ಗ್ರಾಮದ ಬಾಬಿ ಕೊಠಾರಿ ಎಂಬವರ ಮನೆಗೆ 30,000ರೂ, 11ಉಳ್ಳೂರು ಗ್ರಾಮದ ರಾಮ ಪೂಜಾರಿ ಎಂಬವರ ಮನೆಯ ಹಂಚು ಛಾವಣಿ ಹಾರಿಹೋಗಿ 35,000ರೂ., ಯಳಜಿತ್ ಗ್ರಾಮದ ನಾಗಯ್ಯ ಗೌಡರ ಮನೆಗೆ 15,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಕಲ್ಯಾಣಿ ನಾಯಕ್ ಹಾಗೂ ನಲ್ಲೂರು ಗ್ರಾಮದ ಸುಭಾಶ್ಚಂದ್ರ ಜೈನ್ ಎಂಬವರ ಮನೆಗೆ ತಲಾ 20000 ರೂ.ನಷ್ಟವಾಗಿದ್ದರೆ, ದುರ್ಗಾ ಗ್ರಾಮದ ತನಿಯಪ್ಪ ಮೇರಾ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 30,000ರೂ. ನಷ್ಟ ಸಂಭವಿಸಿದೆ. ಅಲ್ಲದೇ ಕಾಪು ತಾಲೂಕು ಉಳಿಯಾರಗೋಳಿಯ ಇಂದಿರಾ ಎಂಬವರ ಮನೆಗೂ 10,000ರೂ.ನಷ್ಟವಾಗಿರುವ ವರದಿ ಬಂದಿದೆ.
30.9ಮಿ.ಮೀ. ಮಳೆ: ಜಿಲ್ಲೆಯಲ್ಲಿ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 30.9 ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 44.9ಮಿ.ಮೀ., ಕಾರ್ಕಳದಲ್ಲಿ 37.4ಮಿ.ಮೀ, ಬೈಂದೂರಿನಲ್ಲಿ 35.9ಮಿ.ಮೀ., ಕುಂದಾಪುರದಲ್ಲಿ 30.7ಮಿ.ಮೀ., ಉಡುಪಿಯಲ್ಲಿ 18.5ಮಿ.ಮೀ. ಹಾಗೂ ಬ್ರಹ್ಮಾವರದಲ್ಲಿ 15.6ಮಿ.ಮೀ. ಮಳೆಯಾದ ವರದಿ ಬಂದಿದೆ.
ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್‌ನ್ನು ಘೋಷಿಸಲಾಗಿದೆ. ಬಜೆ ಡ್ಯಾಮ್‌ನಲ್ಲಿ ಇಂದಿನ ನೀರಿನ ಮಟ್ಟ 6.20ಮೀ. ಆಗಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ 5.18 ಮೀ. ಆಗಿದೆ.