ಬೈಂದೂರಿನಲ್ಲಿ ಸಿಡಿಲು, ಗಾಳಿ-ಮಳೆ ಅಬ್ಬರ | 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿ
ಬೈಂದೂರು, ಮೇ 24: ತಾಲೂಕಿನ ಹಲವೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾದ ಬಗ್ಗೆ ವರದಿಯಾಗಿದೆ.
ಬೈಂದೂರು ಭಾಗದಲ್ಲಿ ಗುರುವಾರ ಸಂಜೆ 7 ಮೀ.ಮೀ.ಗೂ ಅಧಿಕ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸತಾಗಿ ನಿರ್ಮಿಸಲಾಗಿದ್ದ ರೂ.15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಊಟದ ಹಾಲ್ ಮೇಲ್ಛಾವಣಿ ಕುಸಿದು ಬಿದ್ದಿದೆ.
ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಹಳೆ ವೃತ್ತ ನಿರೀಕ್ಷಕರ ಕಚೇರಿ ಮೇಲೆ ಮರ ಉರುಳಿ ಬಿದ್ದಿದೆ. ಬೈಂದೂರು ರಥಬೀದಿಯ ನವೀನ್ ವೈನ್ಸ್ ಹಿಂಭಾಗದ ಮನೆಯ ಶೌಚಾಗೃಹದ ಮೇಲ್ಛಾವಣಿ ಹಾರಿ ಹೋಗಿದೆ. ಮನೆ ಛಾವಣಿ ಕುಸಿತ, ಮರ ಉರುಳಿಬಿದ್ದಿರುವುದು, ರಸ್ತೆ ಮೇಲೆ ವಿದ್ಯುತ್ ಕಂಬ ಉರುಳಿದೆ. ಮೆಸ್ಕಾಂ ಬಳಿ ಮರಬಿದ್ದಿದೆ.
ಕತ್ತಲಲ್ಲಿ ಬೈಂದೂರು: ದೊಂಬೆ ಪರಿಸರದಲ್ಲಿ 12 ವಿದ್ಯುತ್ ಕಂಬಗಳು, 20ಕ್ಕೂ ಅಧಿಕ ತೆಂಗಿನ ಮರಗಳು ಧರೆಗೆ ಉರುಳಿವೆ. ಮೆಸ್ಕಾಂ,ಕಂದಾಯ ಇಲಾಖೆ ದುರಸ್ತಿ ಕಾರ್ಯದಲ್ಲಿ ತೊಡಗಿದೆ. ಒಟ್ಟು ಬೈಂದೂರು ಪರಿಸರದಲ್ಲಿ 50ಕ್ಕೂ ಅಧಿಕ ವಿದ್ಯುತ್ ಕಂಬಗಳು, ಹಲವಾರು ಬೃಹತ್ ಮರಗಳು ಧರೆಗುರುಳಿದ್ದು ವಿದ್ಯುತ್ ಸಂಚಾರ ವ್ಯತ್ಯಯವಾಗಿದೆ. ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ.
ಗುರುವಾರ ಸಂಜೆಯಿಂದ ವಿದ್ಯುತ್ ಇಲ್ಲದೆ ಜನರು ಹೈರಾಣಾಗಿದ್ದು ಶುಕ್ರವಾರ ಸಂಜೆಯೊಳಗೆ ವಿದ್ಯುತ್ ಸಂಪರ್ಕ ಯಥಾಸ್ಥಿತಿ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಗ್ರಾಮ ಲೆಕ್ಕಿಗರು ಸ್ಥಳಕ್ಕೆ ತೆರಳಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ನೀಡಿದ್ದು, ಮೇಲಾಧಿಕಾರಿಗಳಿಗೆ ತಲುಪಿಸುವ ಕಾರ್ಯವಾಗುತ್ತಿದೆ. ಮೆಸ್ಕಾಂ ಸಂಬಂಧಪಟ್ಟ ಸಮಸ್ಯೆಗಳನ್ನು ಸುವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್. ಮಾಹಿತಿ ನೀಡಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.