ದೇಶದ ಇತಿಹಾಸದಲ್ಲಿ ಪುರುಷರಷ್ಟೇ ಮಹಿಳೆಯರೂ ಪ್ರಭಾವಶಾಲಿಗಳು: ಡಾ.ಗಣನಾಥ ಎಕ್ಕಾರು
ಉಡುಪಿಯಲ್ಲಿ ಒನಕೆ ಓಬವ್ವ ಜಯಂತಿ
ಉಡುಪಿ, ನ.11: ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಗಮನಿಸಿ ದಾಗ ಪುರುಷರಷ್ಟೇ, ಹೆಣ್ಣು ಮಕ್ಕಳು ಕೂಡ ಪ್ರಭಾವಶಾಲಿಗಳಾಗಿದ್ದು, ಅವರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದನ್ನು ಗಮನಿಸಬಹುದು ಎಂದು ನಾಡಿನ ಖ್ಯಾತ ಜನಪದ ವಿದ್ವಾಂಸ, ಸಾಹಿತಿ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ನಗರದ ಆದಿಉಡುಪಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ವೇದ ಕಾಲದ ನಂತರ 12ನೇ ಶತಮಾನದ ಕ್ರಾಂತಿಯ ಸಂದರ್ಭದಲ್ಲಿ ಅಕ್ಕ ಮಹಾದೇವಿಯಂಥ ಸ್ತ್ರೀಶಕ್ತಿಯ ಪ್ರತೀಕ ವನ್ನು ಇದಕ್ಕೆ ಉದಾಹರಣೆ ಯಾಗಿ ನೋಡಬಹುದು. ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಶಕ್ತಿ ತುಂಬುವ, ಅವರನ್ನು ಗೌರವಿಸುವ ಸಂದೇಶ ನೀಡುವ ವಿಚಾರಗಳನ್ನು ಒನಕೆ ಓಬವ್ವ ಅವರ ಜೀವನದಲ್ಲಿ ಕಾಣಬಹುದಾಗಿದೆ ಎಂದು ಡಾ.ಎಕ್ಕಾರು ಅಭಿಪ್ರಾಯ ಪಟ್ಟರು.
ಒನಕೆ ಓಬವ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಕ ಯಶಪಾಲ್ ಸುವರ್ಣ, ಒನಕೆ ಓಬವ್ವರ ಜಯಂತಿ ಆಚರಣೆಯ ಮೂಲಕ ಅವರ ಶೌರ್ಯ, ಸಾಹಸ ಹಾಗೂ ವಿಚಾರ ಧಾರೆಗಳನ್ನು ಇಂದಿನ ಯುವ ಜನಾಂಗ ಅರಿಯಲು, ವಿದ್ಯಾರ್ಥಿಗಳು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂದರು.
ಒನಕೆ ಓಬವ್ವ 18ನೇ ಶತಮಾನದ ವೀರ ವನಿತೆ ಮಹಿಳೆ. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ, ಎದೆಗುಂದದೆ ಶತ್ರು ಸೈನ್ಯವನ್ನು ತನ್ನ ಒನಕೆಯಿಂದಲೆ ಮಟ್ಟ ಹಾಕಿದ ಅವಳ ಸಾಹಸ ಇಂದು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.
ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ ಎಸ್ ಮಾತನಾಡಿ, ಶಸ್ತ್ರಗಳನ್ನು ಬಳಸದೇ, ರಣರಂಗ ಪ್ರವೇಶಿಸದೆ, ಕೋಟೆ ಯೊಳಗೆ ನುಗ್ಗುತಿದ್ದ ಅಸಂಖ್ಯಾತ ಶತ್ರು ಸೈನಿಕರನ್ನು ಕೇವಲ ಒಂದು ಒನಕೆಯಿಂದ ಸಂಹರಿಸಿ, ಇತಿಹಾಸ ಪ್ರಸಿದ್ಧವಾದ, ವೀರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರು ಗಳ ಕುತಂತ್ರ ಆಕ್ರಮಣದಿಂದ ರಕ್ಷಿಸಿದ ಧೀಮಂತ ಮಹಿಳೆ ಒನಕೆ ಓಬವ್ವ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಆದಿ ಉಡುಪಿ ಶಾಲಾ ಸಂಸ್ಥೆಯ ಚಂದ್ರಶೇರ್ಖ ಹೆಬ್ಬಾರ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿ ಸಿದರು. ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಆದಿಉಡುಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವೀಂದ್ರ ವಂದಿಸಿದರು.
ಸಮಾರಂಭದಲ್ಲಿ ಕಾರ್ಕಳದ ಅಮಿತ ಮತ್ತು ತಂಡದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.