ಸೆ.25ರಿಂದ ಕಾರ್ಮಿಕರ ಹೋರಾಟ: ಉಡುಪಿಯ ಸಾವಿರಾರು ಮಂದಿ ಭಾಗಿ
ಉಡುಪಿ, ಸೆ.14: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಎಲ್ಲ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಮತ್ತು ಕಾರ್ಮಿಕರಿಗೆ ಬಾಕಿ ಇರುವ ಸೌಲಭ್ಯಗಳ ಅರ್ಜಿಗಳಿಗೆ ಧನಸಹಾಯ ಪಾವತಿಸಲು ಆಗ್ರಹಿಸಿ ಸೆ.25ರಂದು ಎಲ್ಲ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು, ಅ.26 ಹಾಗೂ 27ರಂದು ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಯನ್ನು ಹಾಗೂ ಅಂತಿಮವಾಗಿ ನ.24 ರಿಂದ ಬೆಂಗಳೂರಿನ ಕಲ್ಯಾಣ ಮಂಡಳಿ ಮುಂಭಾಗ ಅನಿರ್ದಿಷ್ಟ ಹೋರಾಟ ವನ್ನು ಹಮ್ಮಿಕೊಳ್ಳಲು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ತೀರ್ಮಾನಿಸಿದೆ.
ಮಂಡಳಿ ಮುಂದೆ ನಡೆಯುವ ಹೋರಾಟದಲ್ಲಿ ಉಡುಪಿ ಜಿಲ್ಲೆಯಿಂದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಅಧ್ಯಕ್ಷ ಶೇಖರ ಬಂಗೇರ, ಕಾರ್ಯದರ್ಶಿ ಶಶಿಧರ ಗೊಲ್ಲ, ಕುಂದಾಪುರ ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ, ಅಧ್ಯಕ್ಷ ಸುರೇಶ್ ಕಲ್ಲಾಗರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಬೈಂದೂರು ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ವಿಜಯ ಕೋಯ ನಗರ, ಕೋಶಾಧಿಕಾರಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.