ಸ್ವಚ್ಛ ಕನ್ನಡ ಭಾಷೆ ಬಳಕೆಗೆ ಯಕ್ಷಗಾನ ಪೂರಕ: ಜಯಪ್ರಕಾಶ್ ಹೆಗ್ಡೆ
ಉಡುಪಿ: ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣ ಸಂಮಿಶ್ರಣವಾಗಿರುವ ಯಕ್ಷಗಾನವು ಸ್ವಚ್ಛ ಕನ್ನಡ ಭಾಷೆ ಬಳಕೆ ಹಾಗೂ ಉಳಿವಿಗೆ ಪೂರಕವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.
ಜಲವಳ್ಳಿ ವಿದ್ಯಾಧರ ರಾವ್ ಅಭಿಮಾನಿ ಬಳಗ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ರವಿವಾರ ಆಯೋಜಿಸಲಾದ ಜಲವಳ್ಳಿ ಅವರ ಸಾರ್ಥಕ ಮೂರು ದಶಕಗಳ ಕಲಾಸೇವೆಯ ಸಂಭ್ರಮ, ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಜಲವಳ್ಳಿ ಯಕ್ಷಯಾನ-೩೦ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲಾವಿದ, ಉಪನ್ಯಾಸಕ ವಿದ್ವಾನ್ ದತ್ತಮೂರ್ತಿ ಭಟ್ ಶಿವಮೊಗ್ಗ ಮಾತನಾಡಿ, ಕಲಾವಿದ ಮೇಳದ ಆಸ್ತಿ. ಕಲಾವಿದರು ಆರೋಗ್ಯವಂತರಾಗಿದ್ದಾಗ ಕಲೆ, ಮೇಳಗಳು ನಡೆಯುವುದಕ್ಕೆ ಸಾಧ್ಯ. ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರ ನೇಮಕದ ಜತೆಗೆ ಯಕ್ಷಗಾನಕ್ಕಾಗಿಯೇ ವಿಶ್ವವಿದ್ಯಾಲಯವೊಂದನ್ನು ತೆರೆಯಬೇಕು. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದರು.
ಶಾಸಕ ಯಶಪಾಲ್ ಎ.ಸುವರ್ಣ, ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ಶೆಟ್ಟಿ ಬಾರ್ಕೂರು, ಬ್ರಹ್ಮಾವರ ವಿಎಸ್‌ಎಸ್ ಸಂಘದ ನಿರ್ದೇಶಕ ಬಿರ್ತಿ ರಾಜೇಶ ಶೆಟ್ಟಿ, ಉದ್ಯಮಿ ಪುರುಷೋತ್ತಮ್ ಪಿ.ಶೆಟ್ಟಿ, ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಉಪಸ್ಥಿತರಿದ್ದರು.