ಕಾಲೇಜುಗಳ ವೈಆರ್‌ಸಿ ಅಧಿಕಾರಿಗಳಿಗೆ ಯುವ ರೆಡ್‌ಕ್ರಾಸ್ ತರಬೇತಿ
ಉಡುಪಿ, ಅ.5: ಕಾಲೇಜು ಯುವ ರೆಡ್‌ಕ್ರಾಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳು ತರಬೇತಿಯನ್ನು ಪಡೆದು ಅದನ್ನು ತಮ್ಮ ವ್ಯಾಪ್ತಿಯ ವಿದ್ಯಾರ್ಥಿ ಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ತಲುಪಿಸಿ, ಯುವ ರೆಡ್‌ಕ್ರಾಸ್‌ನ ಕಾರ್ಯ ಕ್ರಮವನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರೆಡ್‌ಕ್ರಾಸ್ ಸೊಸೈಟಿ ಉಡುಪಿ ಜಿಲ್ಲಾ ಘಟಕ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳ ವೈ.ಆರ್.ಸಿ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ಇಂದು ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ನಡೆದ ಯುವ ರೆಡ್‌ಕ್ರಾಸ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಶಾಲಾ-ಕಾಲೇಜು ಹಂತದಲ್ಲಿಯೇ ಮೂಡಿಸಬೇಕು. ಯುವರೆಡ್‌ಕ್ರಾಸ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು. ತರಬೇತಿ ಪಡೆದ ತರಬೇತುದಾರರು ಸಮಾಜ ಮುಖಿ ವಾತಾವರಣ ವನ್ನು ಸೃಷ್ಠಿಸುವುದರ ಮೂಲಕ ರೆಡ್‌ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಅದ್ವಿತೀಯ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಮಾತ ನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾನವೀಯ ನೆಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಕಾಲೇಜುಗಳಲ್ಲಿ ಯೂತ್‌ರೆಡ್‌ಕ್ರಾಸ್ ಘಟಕವನ್ನು ಪರಿಣಾಮಕಾರಿಯಾಗಿ ಅನು ಷ್ಠಾನಗೊಳಿಸು ವುದರೊಂದಿಗೆ ಸಮಾಜಕ್ಕೆ ಸೇವೆ ನೀಡುವಂತಹ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ರೆಡ್‌ಕ್ರಾಸ್ ಮ್ಯಾನೆಜಿಂಗ್ ಕಮಿಟಿ ಸದಸ್ಯ ವಿ.ಜಿ.ಶೆಟ್ಟಿ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮೊದಲಾದ ವರು ಉಪಸ್ಥಿತರಿದ್ದರು. ವೈ.ಆರ್.ಸಿ ತರಬೇತುದಾರರಾದ ಸಚೇತ್ ಸುವರ್ಣ ಹಾಗೂ ಅನುರಾಧ ತರಬೇತಿ ನೀಡಿದರು.
ಮಂಗಳೂರು ವಿವಿ ಯೂತ್ ರೆಡ್‌ಕ್ರಾಸ್ ನೋಡೆಲ್ ಅಧಿಕಾರಿ ಡಾ.ಗಾಯತ್ರಿ ಎನ್. ಸ್ವಾಗತಿಸಿದರು. ರಾಘವೇಂದ್ರ ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ರಮಾದೇವಿ ವಂದಿಸಿದರು.