ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಭ್ಯ ಪದ ಬಳಕೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
PC: screengrab/fb.com
ಬೆಂಗಳೂರು: ಮೋಹಿತ್ ನರಸಿಂಹ ಮೂರ್ತಿ ಎಂಬ ವ್ಯಕ್ತಿಯೋರ್ವ ವಿಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ್ದು, ಸದ್ಯ ಈ ವಿಡಿಯೋಗಳು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಕೇಳಿ ಬಂದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಅದಾನಿಯನ್ನು ತಕ್ಷಣವೇ ಬಂಧಿಸಿ, ತಪ್ಪಿಸಿಕೊಳ್ಳಲು ಬಿಡಬೇಡಿ ಎಂಬ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಚಿಕ್ಕಬಳ್ಳಾಪುರದ ಮೋಹಿತ್ ನರಸಿಂಹ ಮೂರ್ತಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಪದ ಬಳಸಿದ್ದಲ್ಲದೇ, ಕಾಂಗೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಮೋಹಿತ್ ನರಸಿಂಹ ಮೂರ್ತಿ ಎಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ದ ನಿಂದನಾತ್ಮಕ ಹೇಳಿಕೆ ನೀಡಿರುವ ಮೋಹಿತ್ ನರಸಿಂಹ ಮೂರ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣ ಬಳಕೆದಾರರು” ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಪೂರ್ಣವಾಗಿ ಜನಮೆಚ್ಚುವಂತೆ ರಾಜಕಾರಣಿಗಳನ್ನು ಟೀಕಿಸು, ಲೇವಡಿ ಮಾಡು. ಅದನ್ನು ಬಿಟ್ಟು ಹೀಗೆ ಪ್ರತಿಕ್ರಿಯಿಸಿ ಶಿಕ್ಷೆಗೆ ಗುರಿಯಾಗಬೇಡ. ಯಾರೂ ಸಹ ಮುಖ್ಯಮಂತ್ರಿ ಪದದ ವಿರುದ್ದದ ಆ ಪದ ಬಳಕೆಯನ್ನು ಒಪ್ಪಲಾರರು” ಎಂದು ಹೇಳಿದ್ದಾರೆ.
ಸಿಎಂ ವಿರುದ್ದ ಅಸಭ್ಯ ಪದ ಬಳಕೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ FIR ದಾಖಲಿಸಬೇಕು ಎಂದು ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ ಆಗ್ರಹಿಸಿದ್ದಾರೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ವಿರುದ್ಧವೂ ಈತ ತುಂಬಾ ನಿಂದನಾತ್ಮಕವಾಗಿ ಮಾತನಾಡಿದ ವೀಡಿಯೋ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.