ಭಟ್ಕಳ| ತಂಝೀಮ್ ಮಿಲ್ಲಿಯಾ ಮಸೀದಿ ನವೀಕರಣ: ಎ.10ರಂದು ಉದ್ಘಾಟನೆ

ಭಟ್ಕಳ: ಮಜ್ಲಿಸೆ ಮಿಲ್ಲಿಯಾ ನವಾಯತ್ ಕಾಲೋನಿ ಆಡಳಿತ ಮಂಡಳಿಯ ವತಿಯಿಂದ ನವೀಕರಣ ಗೊಂಡ "ತಂಝೀಮ್ ಮಿಲ್ಲಿಯಾ ಮಸೀದಿ" ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಕಾರ್ಯದರ್ಶಿ ಮೌಲಾನ ಉಮರೈನ್ ಮೆಹಫೂಝ್ ರಹ್ಮಾನಿ ಅವರು ಎ.10ರ ಸಂಜೆ 4:30ಕ್ಕೆ ಮಸೀದಿಯನ್ನು ಉದ್ಘಾಟಿಸಲಿ ದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಅತಿಕುರ್ರಹ್ಮಾನ್ ಮುನೀರಿ ತಿಳಿಸಿದರು.
ನವಾಯತ್ ಕಾಲೋನಿಯ ಮಜ್ಲಿಸೆ ಮಿಲ್ಲಿಯಾ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ಮಸೀದಿಯ ನವೀಕರಣ ಕಾರ್ಯ ನಡೆಯುತ್ತಿದ್ದು, ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇವೆ ಎಂದರು. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾದ ಈ ಮಸೀದಿ, ಕರಾವಳಿ ಕರ್ನಾಟಕದ ಅತ್ಯಂತ ಸುಂದರ ಮತ್ತು ವಿಶಾಲವಾದ ಮಸೀದಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ತಂಝೀಮ್ ಮಿಲ್ಲಿಯಾ ಮಸೀದಿಯು ಕೇವಲ ಪ್ರಾರ್ಥನಾ ಸ್ಥಳವಾಗಿ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭಟ್ಕಳದ ಕೇಂದ್ರೀಯ ಮಸೀದಿಯಾಗಿ ಇದು ಮಾರ್ಪಾಡಾಗಲಿದೆ ಎಂದು ಡಾ. ಅತಿಕುರ್ರಹ್ಮಾನ್ ಮುನೀರಿ ವಿವರಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ರಾತ್ರಿ 8:30ಕ್ಕೆ ಪ್ರಸಿದ್ಧ ಯುವ ಕುರಾನ್ ಪಠನಕಾರರಾದ ಖಾರಿ ಹಿದಾಯತುಲ್ಲಾ ಜೈಪೂರಿ (ರಾಜಸ್ಥಾನ) ಮತ್ತು ಖಾರಿ ಆಹಮದ್ ರುಕ್ನುದ್ದೀನ್ ಭಟ್ಕಳ ಅವರಿಂದ ಕುರ್‌ಆನ್ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಂಝೀಮ್ ಮಿಲ್ಲಿಯಾ ಮಸೀದಿಯ ಇಮಾಮ್ ಮೌಲಾನ ಮುಹಮ್ಮದ್ ಇರ್ಫಾನ್ ನದ್ವಿ ಮತ್ತು ಆಡಳಿತ ಮಂಡಳಿಯ ಸದಸ್ಯ ಜಾವೀದ್ ಅರ್ಮಾರ್ ಉಪಸ್ಥಿತರಿದ್ದರು. ಈ ಮಸೀದಿಯ ಉದ್ಘಾಟನೆಯು ಭಟ್ಕಳದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಲಿದೆ.