ಭಟ್ಕಳ: ನ.24ರಂದು ವೈದ್ಯಕೀಯ ಶಿಬಿರ ಆಯೋಜನೆ
ಭಟ್ಕಳ: ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕ್ರಿಯಾಶೀಲ ಗೆಳೆಯರ ಬಳಗದ ನೇತೃತ್ವದಲ್ಲಿ, ಭಟ್ಕಳ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ನ.24ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಭಾಗವಹಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಜೈಸನ್, ಈ ಶಿಬಿರದಲ್ಲಿ ಎಲುಬು ಮತ್ತು ಕೀಲು ತಜ್ಞರು ಡಾ. ವಿಕ್ರಮ್ ಶೆಟ್ಟಿ, ಜನರಲ್ ಸರ್ಜನ್ ಡಾ. ಅಭಿಜಿತ್ ಎಸ್. ಶೆಟ್ಟಿ, ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ. ನಾಯ್ಕ, ಮತ್ತು ಡಾ. ಪೃಥ್ವಿ ಕೆ.ಪಿ. ತಪಾಸಣೆ ಹಾಗೂ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಭಾಗವಹಿಸುವವರು ಪೂರ್ವದಲ್ಲಿಯೇ ಯಾವುದಾದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರೆ, ತಮ್ಮ ಹಳೆಯ ವೈದ್ಯಕೀಯ ದಾಖಲೆಗಳನ್ನು ತರಬೇಕು.
•ಕೆ.ಎಸ್. ಹೆಗ್ಡೆ ಆಸ್ಪತ್ರೆ ಮೂಲಕ "ಕ್ಷೇಮ ಹೆಲ್ತ್ ಕಾರ್ಡ್" ಹೆಸರಿನ ಆರೋಗ್ಯ ವಿಮಾ ಯೋಜನೆ ಲಭ್ಯವಿದ್ದು, ಆಸಕ್ತರು ವೈಯಕ್ತಿಕ ಮತ್ತು ಕುಟುಂಬದ ಸದಸ್ಯರ ಆರೋಗ್ಯ ವಿಮೆಯನ್ನು ಶಿಬಿರದಲ್ಲಿಯೇ ಮಾಡಿಸಬಹುದಾಗಿದೆ. ಈ ಯೋಜನೆಗೆ ಆಧಾರ್ ಮತ್ತು ರೇಷನ್ ಕಾರ್ಡ್ ಝೆರಾಕ್ಸ್ ಪ್ರತಿ ಕಡ್ಡಾಯವಾಗಿದೆ.
ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಶಿಬಿರದಲ್ಲಿ ತಜ್ಞ ವೈದ್ಯರು ಭಾಗವಹಿಸುವುದರಿಂದ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.