ಡಿ. 31ರಂದು ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ; ನಾರಾಯಣ ಯಾಜಿ ಶಿರಾಲಿ ಅಧ್ಯಕ್ಷರಾಗಿ ಆಯ್ಕೆ
ಭಟ್ಕಳ: ಭಟ್ಕಳ ತಾಲೂಕು 11ನೇ ಸಾಹಿತ್ಯ ಸಮ್ಮೇಳನವನ್ನು ಡಿ.31ರಂದು ಅಳಿವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ.
ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ನಾರಾಯಣ ಯಾಜಿ ಶಿರಾಲಿಯವರನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರೇಮಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಕನ್ನಡಾಭಿಮಾನಿಗಳು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಮಾಡಲು ಕೋರಲಾಗಿದೆ.
ಸರ್ವಾಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ, ಭಟ್ಕಳ ಘಟಕದ ಗೌರವ ಕೊಶಾಧ್ಯಕ್ಷ ಶ್ರೀಧರ ಶೇಟ್, ಸಂಘಟನಾ ಕಾರ್ಯ ದರ್ಶಿ ಸಂತೋಷ್ ಆಚಾರ್ಯ, ಸದಸ್ಯರಾದ ಎಂ. ಪಿ. ಬಂಡಾರಿ, ಪೂರ್ಣಿಮಾ ಕರ್ಕಿಕರ್, ಕೃಷ್ಣ ಮೊಗೇರ್, ಗಣೇಶ ಯಾಜಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಸಮ್ಮೇಳನದ ಎಲ್ಲಾ ಕನ್ನಡ ಪ್ರೇಮಿಗಳು ಈ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಕರೆ ನೀಡಿದ್ದಾರೆ.
ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಪರಿಚಯ
ಡಿ. 31ರಂದು ಅಳಿವೆಕೋಡಿಯಲ್ಲಿ ನಡೆಯಲಿರುವ ಭಟ್ಕಳ ತಾಲೂಕ 11ನೇ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾಗಿ ಸಾಹಿತಿ ನಾರಾಯಣ ಯಾಜಿ ಶಿರಾಲಿ ಆಯ್ಕೆಯಾಗಿದ್ದಾರೆ.
ನಾರಾಯಣ ಯಾಜಿ ಅವರು ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ತಮ್ಮ ಪ್ರಾಥಮಿಕ, ಮಧ್ಯಾಮಿಕ ಶಿಕ್ಷಣ ಪಡೆದು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ,ಕರ್ನಾಟಕ ವಿ. ವಿ. ಯಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಉಡುಪಿ ಯ ಲಾ ಕಾಲೇಜಿನಿಂದ ಕಾನೂನು ಪದವಿ, ಶಿವಮೊಗ್ಗ ದ ಕುವೆಂಪು ವಿ.ವಿ ಯಿಂದ ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದಾರೆ. ಶಿರಾಲಿಯ ಗೊಂಡರು ಎಂಬ ಜನಾಂಗಿಯ ಅಧ್ಯಯನ ಕ್ರತಿ, ಸಹಕಾರ ಕವನ ಸಂಕಲನ, ಶತಕದ ಸಂಭ್ರಮದಲ್ಲಿ ಭಾರತ ದ ಸಹಕಾರ ಕ್ಷೇತ್ರ ಮತ್ತು ನಾನೇಕೆ ಬರೆಯುತ್ತೇನೆ, ನಿವೃತ್ತಿಯ ನಂತರ ಎಂಬ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಚಿಂತನಗಳು ಭದ್ರಾವತಿ ಮತ್ತು ಕಾರವಾರ ಆಕಾಶ ವಾಣಿ ಯಿಂದ ಬಿತ್ತರಗೊಂದಿವೆ. ಇವರ ಸಣ್ಣಕತೆ, ಲೇಖನಗಳು, ಕವನಗಳು ನವಭಾರತ ಉದಯವಾಣಿ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.