ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ಶಿರಸಿಯಲ್ಲಿ ಬಿಜೆಪಿ ವತಿಯಿಂದ ರ್‍ಯಾಲಿ
ಶಿರಸಿ: ‘500 ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಿಕ್ಕಿದ ಮರುದಿನವೇ ನಿರ್ಣಯ ಕೈಗೊಳ್ಳ ಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ನಿರ್ಧಾರ ಕೈಗೊಳ್ಳಲು 56 ಇಂಚಿನ ಎದೆ ಬೇಕಾಗಿತ್ತು’ ಎಂದು ಪ್ರಧಾನಿ ಮೋದಿ ಹೇಳಿದರು.
ರವಿವಾರ ಶಿರಸಿಯಲ್ಲಿ ಬಿಜೆಪಿ ವತಿಯಿಂದ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ಸಾಧ್ಯವಾಯಿತು. ರಾಮ ಮಂದಿರ ಪುಣ್ಯ, ಪವಿತ್ರ ಕಾರ್ಯ. ಪುಣ್ಯದ ಹಕ್ಕುದಾರ ಯಾರು? ಮತ ನೀಡಿ ಶಕ್ತಿಯುತ ಸರ್ಕಾರ ನೀಡಿದ ನೀವೇ ಪುಣ್ಯವಂತರು’ ಎಂದರು.
ಮಂದಿರ ನಿರ್ಮಾಣವಾಗದಂತೆ ವಿಕೃತ ಮನಸ್ಥಿತಿಯವರೆಲ್ಲ ಒಂದಾಗಿದ್ದರು. ಕಾಂಗ್ರೆಸ್ ಮತ್ತು ಎಲ್ಲ ಮಿತ್ರ ಪಕ್ಷಗಳು ಮಂದಿರ ನಿರ್ಮಾಣದ ವಿರುದ್ಧ ಕೋರ್ಟ್ ನಲ್ಲೂ ಹೋರಾಟ ನಡೆಸಿದರು. ಎಲ್ಲವನ್ನೂ ಮರೆತು ಆಮಂತ್ರಣ ನೀಡಿದರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ರಾಮಲಲ್ಲಾನಿಗೆ ಅವಮಾನ ಮಾಡಿದರು. ಅವರನ್ನು ನೀವು ಬಹಿಷ್ಕರಿಸಿ ಎಂದು ಹೇಳಿದರು.
‘ರಾಮ ಮಂದಿರದ ವಿರುದ್ಧ ತಲೆಮಾರುಗಳಿಂದ ಹೋರಾಟ ನಡೆಸಿದ್ದ ಅನ್ಸಾರಿ ಕುಟುಂಬಕ್ಕೂ ಆಮಂತ್ರಣ ನೀಡಲಾಗಿತ್ತು. ಮುಸಲ್ಮಾನರಾದರೂ ಅವರು ಕೂಡ ಎಲ್ಲವನ್ನು ಮರೆತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು’ ಪ್ರಧಾನಿ ಮೋದಿ ಹೇಳಿದರು.