ಅಂಕೋಲಾ ಗುಡ್ಡ ಕುಸಿತ ಪ್ರಕರಣ| ಹಾನಿಗೊಳಗಾದ ಕುಟುಂಬಗಳಿಗೆ HRS ನಿಂದ ನೆರವು
ಉಳುವೆರೆ : ಶಿರೂರು ಸಮೀಪದ ಉಳುವೆರೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ಕುಟುಂಬಗಳಿಗೆ ತೀವ್ರ ತೊಂದರೆಗೀಡಾಗಿದ್ದು, 7 ಮನೆಗಳು ಧ್ವಂಸಗೊಂಡಿದೆ. 21 ಮನೆಗಳು ಭಾಗಶಃ ಹಾನಿಯಾಗಿದೆ. ಈ ನೈಸರ್ಗಿಕ ವಿಕೋಪ ದಿಂದ ಅನೇಕ ನಿವಾಸಿಗಳು ನಿರಾಶ್ರಿತರಾಗಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಭೂಕುಸಿತದಿಂದ 10 ರಿಂದ 11 ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದುವರೆಗೆ ಎಂಟು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಮೃತಪಟ್ಟವರಲ್ಲಿ ಟೀ ಅಂಗಡಿ ಹೊಂದಿದ್ದ ಒಂದೇ ಕುಟುಂಬದ ಐವರು ಸೇರಿದ್ದಾರೆ. ಅವಶೇಷಗಳಡಿಯಲ್ಲಿ ಹೂತು ಹೋಗಿರುವ ಕೇರಳದ ಲಾರಿ ಚಾಲಕನ ಪತ್ತೆಗೆ ಪ್ರಯತ್ನ ಮುಂದುವರಿದಿದೆ.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್) ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಸ್ವಯಂಸೇವಕರು ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಪಡಿತರ ಸಾಮಗ್ರಿಗಳನ್ನು ವಿತರಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೌಲಾನಾ ಝುಬೇರ್ ಎಸ್.ಎಂ (ರಾಜ್ಯ ಸಮಿತಿ ಸದಸ್ಯ), ಅಮೀರ್ (ಮಂಗಳೂರು ವಲಯ ನಾಯಕ), ಆನಂ ಅಲಾ (ಗ್ರೂಪ್ ಲೀಡರ್ ಭಟ್ಕಳ), ಖಮರುದ್ದೀನ್ ಮಶೈಖ್ (ಜಿಲ್ಲಾ ಅಧ್ಯಕ್ಷ), ಫರ್ಹಾನ್ ಆಜಯೇಬ್, ಮತ್ತು ಶಫತ್ ಶಾಬಂದರಿ ಭೇಟಿ ನೀಡಿದ ತಂಡದಲ್ಲಿದ್ದರು.
ಭಾರತದಾದ್ಯಂತ ನೈಸರ್ಗಿಕ ವಿಕೋಪಗಳಿಗೆ 24 ಗಂಟೆಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ ಸಂಸ್ಥೆಗಿದೆ. ಸಂತ್ರಸ್ತರಿಗೆ ತ್ವರಿತವಾಗಿ ಸಹಾಯ ಮಾಡಲು ಸಂಸ್ಥೆಯು ಬಧ್ಧವಾಗಿ ಎಂದು ಎಚ್‌ಆರ್‌ಎಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರ್ಕರ ಹೇಳಿದ್ದಾರೆ.
ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ರಕ್ಷಣೆ ಪಡೆದುಕೊಳ್ಳುಲು ಸಂತ್ರಸ್ತರಿಗೆ ಸಾಧ್ಯವಾಗಲಿಲ್ಲ. ಕೆಲವೇ ಮಂದಿ ದುರಂತದಲ್ಲಿ ಬದುಕುಳಿದರು. ಸಂತ್ರಸ್ತರಾದವರಿಗೆ ಅಗತ್ಯ ಸಾಮಗ್ರಿಗಳನ್ನು ಮಾತ್ರವಲ್ಲದೆ, ಭಾವನಾತ್ಮಕ ಬೆಂಬಲವನ್ನು ಒದಗಿಸಲು HRS ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ.