ಶಿರೂರು ದುರಂತ ಸ್ಥಳದ ಸಮೀಪ ಮತ್ತೆ ಗುಡ್ಡ ಅಗೆತ
ಪೂರ್ಣಗೊಳ್ಳದ ಚತುಷ್ಪಥ ಕಾಮಗಾರಿ ► ಮಣ್ಣು ಕುಸಿಯುವ ಭೀತಿಯಲ್ಲಿ ಸ್ಥಳೀಯರು

ಅಂಕೋಲಾ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶಿರೂರು ಗುಡ್ಡ ಕುಸಿತ ದುರಂತದ ಕಹಿ ನೆನಪು ಮಾಸುವ ಮುನ್ನವೇ ಈಗ ಮತ್ತೆ ದುರಂತ ನಡೆದ ಸಮೀಪದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹಿಟಾಚಿ ಮೂಲಕ ಗುಡ್ಡ ಕತ್ತರಿಸುವ ಕಾರ್ಯ ಮುಂದುವರಿದಿದೆ. ಇದರಿಂದಾಗಿ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ.
2024ರ ಜು.16ರಂದು ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ಒಟ್ಟು 11 ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಬಳಿಕ 9 ಮಂದಿಯ ಮೃತದೇಹಗಳು ಪತ್ತೆಯಾಗಿತ್ತು. ಅದರಲ್ಲೂ, ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳದ ಟ್ರಕ್ ಹಾಗೂ ಅದರ ಚಾಲಕ ಅರ್ಜುನ್ ಹುಡುಕಾಟಕ್ಕೆ ಸಾಕಷ್ಟು ಕಾರ್ಯಾಚರಣೆಯನ್ನೇ ಮಾಡಬೇಕಾಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ನೌಕಾಸೇನೆ, ಭೂ ಸೇನೆ, ಮುಳುಗು ತಜ್ಞರು ಸೇರಿ ಒಟ್ಟು ನೂರಕ್ಕೂ ಅಧಿಕ ಜನ ನಿರಂತರ ಶೋಧ ಕಾರ್ಯ ನಡೆಸಿದ್ದು, 71 ದಿನಗಳ ನಂತರ ಟ್ರಕ್ ಸಹಿತ ಅರ್ಜುನ್ ಮೃತದೇಹದ ಅವಶೇಷ ಪತ್ತೆಯಾಗಿತ್ತು. ಈ ಘಟನೆ ದೇಶವನ್ನೇ ತಲ್ಲಣಗೊಳಿಸಿತ್ತು.
ಆದರೆ, ಈಗ ಮತ್ತೆ ಚತುಷ್ಪಥ ಹೆದ್ದಾರಿಗಾಗಿ ದುರಂತ ನಡೆದ ಸ್ಥಳದ ಸಮೀಪ ಗುಡ್ಡ ಕೊರೆತ ಕಾರ್ಯ ಮುಂದುವರಿದಿರುವುದು ಸ್ಥಳೀಯರು ಸೇರಿದಂತೆ ಪ್ರಯಾಣಿಕರಲ್ಲಿಯೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಗೊಂಡು ದಶಕಗಳೇ ಕಳೆದರೂ ಇದುವರೆಗೂ ಪೂರ್ಣಗೊಂಡಿಲ್ಲ. ಜನರು ಕೂಡ ಪರ್ಯಾಯ ಮಾರ್ಗ ಕಾಣದೆ ಈ ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ. ಅರ್ಧಂಬರ್ಧ ಕಾಮಗಾರಿಯಿಂದಾಗಿ ಈಗಲೂ ಅಪಘಾತ, ಅವಘಡಗಳು ನಡೆಯುತ್ತಲೇ ಇವೆ. ಅಲ್ಲದೆ, ಸಾಕಷ್ಟು ಅಪಾಯಕಾರಿ ತಿರುವುಗಳಿದ್ದರೂ ಹಿರಿಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನದಿಗೆ ಬಿದ್ದ ಗುಡ್ಡದ ಮಣ್ಣು ಹಾಗೇ ಉಳಿದು ಕೊಂಡಿದೆ. ಅದನ್ನು ಕೂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಇದನ್ನು ಮಳೆಗಾಲದಲ್ಲಿಯೂ ತೆರವುಗೊಳಿಸದಿದ್ದರೆ ಬೆಳಸೆ, ಅಗ್ರಗೋಣ, ಸಗಡಗೇರಿ, ವಾಸರಕುದ್ರಿಗೆ, ಅಗಸೂರು, ಸುಂಕಸಾಳ, ಡೋಂಗ್ರಿ ಗ್ರಾಪಂ ವ್ಯಾಪ್ತಿ ಪ್ರದೇಶದ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶಿರೂರಿನಲ್ಲಿ ಸಂಭವಿಸಿದ ದುರಂತದಲ್ಲಿ ಗುಡ್ಡ ಕುಸಿತದ ಮಣ್ಣು ಗಂಗಾವಳಿ ನದಿಯನ್ನು ಆವರಿಸಿಕೊಂಡಿದ್ದು, ಇದುವರೆಗೂ ಅದನ್ನು ತೆರವುಗೊಳಿಸದೇ ಇರುವುದು ಆಘಾತಕಾರಿ ಸಂಗತಿ. ಇದರ ಜೊತೆಗೆ ಈಗ ಮತ್ತೆ ಶಿರೂರಿನಲ್ಲಿ ಗುಡ್ಡದ ಮಣ್ಣನ್ನು ಅಗೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇನ್ನು ಮುಂದೆ ಇಲ್ಲಿ ಯಾವುದೇ ಅನಾಹುತಗಳು ನಡೆದರೂ ಅದಕ್ಕೆ ಸಂಬಂಧಿಸಿದ ಇಲಾಖೆ, ಗುತ್ತಿಗೆ ಕಂಪೆನಿ ಜವಾಬ್ದಾರಿಯಾಗಲಿವೆ.
-ರಮೇಶ ಗೌಡ, ಶಿರೂರು
ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಹೀಗಾಗಿ ಇಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಕಂಪೆನಿಯವರಿಗೆ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ಶಿರೂರಿನಲ್ಲಿ ಅಪಾಯವಾಗದಂತೆ ತಡೆಗಟ್ಟಬೇಕಾದದ್ದು ಇಲಾಖೆ ಮತ್ತು ಗುತ್ತಿಗೆ ಕಂಪೆನಿಯ ಜವಾಬ್ದಾರಿಯಾಗಿದೆ.
-ಲಕ್ಷ್ಮೀಪ್ರಿಯಾ ಕೆ., ಉತ್ತರ ಕನ್ನಡ ಜಿಲ್ಲಾಧಿಕಾರಿ