ಬಿಜೆಪಿ ಕಟ್ಟಿದವರು ಮನೆಯಲ್ಲಿ, ಹೊಸಮುಖಗಳು ಕಣದಲ್ಲಿ: ಡಿಕೆ ಶಿವಕುಮಾರ್
ಗೋಕರ್ಣ: “ನಮ್ಮ ವಿರುದ್ಧ ಹೋರಾಟ ಮಾಡಿದ, ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿ, ಹೊಸಮುಖಗಳನ್ನು ಕಣಕ್ಕೆ ಇಳಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ನಾನು ಹೇಳಬೇಕಾದ ಅವಶ್ಯಕತೆ ಇಲ್ಲ. ಪಕ್ಷದ ಅಧ್ಯಕ್ಷ, ಮಾಜಿ ಸಚಿವ, ಮಾಜಿ ಮುಖ್ಯ ಮಂತ್ರಿಗ ಇವರಿಗೆ ಯಾರಿಗೂ ಟಿಕೆಟ್ ಸಿಕ್ಕಿಲ್ಲ. ಪಕ್ಷ ಕಟ್ಟಿದವರು, ಕಟ್ಟಲು ರಾಜ್ಯ ಪ್ರವಾಸ ಮಾಡಿದವರು ಮನೆಯಲ್ಲಿ, ಹೊಸಬರು ಫೀಲ್ಡ್ ನಲ್ಲಿದ್ದಾರೆ ಎಂದು ಟೀಕಿಸಿದರು.
ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ನಮ್ಮ ಚುನಾವಣಾ ಪ್ರಚಾರ ಪ್ರಾರಂಭ ಮಾಡ್ತಾ ಇದ್ದೇವೆ. ಪ್ರಯತ್ನಕ್ಕಿಂತ ಪ್ರಾರ್ಥನೆ ಫಲಕೊಡುತ್ತದೆ ಎಂಬ ನಂಬಿಕೆ ನನಗಿದೆ. ಹಾಗಾಗಿ ತೀರ್ಥ ಯಾತ್ರೆ ಕೈಗೊಂಡಿದ್ದೇನೆ. ನುಡಿದಂತೆ ನಡೆಯುವ ಶಕ್ತಿ ನಮಗೆ ದೇವರು ಕೊಟ್ಟಿದ್ದಾನೆ. ಚುನಾವಣಾ ಪೂರ್ವದಲ್ಲೂ ನಾನು ದೇವರ ದರ್ಶನಕ್ಕೆ ಹೋಗಿದ್ದೆ. ಮನಸ್ಸಿಗೆ ಸಮಾಧಾನವಿದೆ. ಈಗ ಆತ್ಮ ಧೈರ್ಯ ಇದೆ. ಯಶಸ್ಸು ಸಿಗುವ ಎಲ್ಲಾ ವಾತಾವರಣ ದೇಶದಲ್ಲಿ ಕಾಣಿಸುತ್ತಿದೆ ಎಂದರು.
ಸಿಎಂ ಸ್ಥಾನದ ವಿಚಾರವಾಗಿ ತಮ್ಮ ಹೆಸರು ಮತ್ತೆ ಮುನ್ನೆಲೆಗೆ ಬರುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕೈ ಕೆಳಗೆ ಉಪಮುಖ್ಯ ಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನೇ ಆಸೆ ಪಟ್ಟರು ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿದೆ. ಈಗ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದು, ಅವರ ನಾಯಕತ್ವದಲ್ಲಿ ರಾಜ್ಯ ಉತ್ತಮವಾಗಿ ಬೆಳೆಯಬೇಕು ಎಂಬುವುದು ನಮ್ಮೆಲ್ಲರ ಆಸೆ ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ದಳದವರು ಮೊದಲೇ ಎಡವಿದ್ದಾರೆ. ಜಾತ್ಯತೀತ ಎಂಬ ಪದ ಇಲ್ಲ. ಅವರ ಕುಟಂಬದ ಸದಸ್ಯರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸಿದ ಮೇಲೆ ಜೆಡಿಎಸ್ ಇದೆ ಎಂದು ಹೇಳಲು ಎಂದು ಹೇಳಲು ಆಗುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.
ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದವರ ವಿರುದ್ಧ ಐಟಿ, ಇಡಿ ಸಿಬಿಐ ದಾಳಿ ಬಗ್ಗೆ, ಚುನಾವಣೆ ಸಮೀಸುತ್ತಿರುವ ವೇಳೆ ಆಪ್ ಮುಖ್ಯಸ್ಥ ಕೇಜ್ರಿವಾಲ್ ಬಂಧನದ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಇದು ಚುನಾವಣೆ ಸಮಯ. ಪ್ರಕೃತಿ ನಿಯಮ ಅಂತ ಇದೆ. ಆ ಸಮಯದಲ್ಲಿ ಪ್ರಕೃತಿ ಉತ್ತರ ಕೊಡುತ್ತದೆ. ಏನೇನು ನಡೆಯುತ್ತಿದೆ ಎಂದು ನಮಗೆಲ್ಲಾ ಗೊತ್ತಿದೆ . ಜನರು ಇದನ್ನೆಲ್ಲಾ ನೋಡುತ್ತಿದ್ದಾರೆ. ಅವರೇ ಉತ್ತರ ಕೊಡಲಿದ್ದಾರೆ ಎಂದರು.
ಬಿಜೆಪಿ ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ನೀಡದೇ ಎಲ್ಲರನ್ನು ಸಮಾನವಾಗಿ ನೋಡುವ ಸಂದೇಶ ಸಾರುತ್ತಿದ್ದಾರಾ ಎಂ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ಅವರ ಸಂದೇಶ ಏನೂ ಇಲ್ಲ, ಸಮಾನತೆಯೂ ಇಲ್ಲ. ಹೋರಾಟ ಮಾಡಿದವರಿಗೆ ವಿಶ್ರಾಂತಿ ಪಡೆಯಿರಿ ಎಂದು ಮನೆಯಲ್ಲಿ ಕೂರಿಸಿದ್ದಾರೆ” ಎಂದು ಹೇಳಿದರು.
ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ವಿರೋಧವಿದೆ ಎಂಬ ಪ್ರಶ್ನೆಗೆ, “ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಯಾರನ್ನೂ ವಿರೋಧ ಮಾಡುವ ಪ್ರಶ್ನೆ ಇಲ್ಲ. ಪಕ್ಷ ತೀರ್ಮಾನದ ವಿರುದ್ಧ ಆಂತರಿಕವಾಗಿ ಹಾಗೂ ಬಹಿರಂಗವಾಗಿ ವಿರೋಧಿಸುವಂತಿಲ್ಲ”ಎಂದು ತಿಳಿಸಿದರು.