ಅಂಕೋಲಾ: ಗುಡ್ಡ ಕುಸಿತ ಪ್ರಕರಣ; ರಾಡಾರ್ ಮೂಲಕ ವಾಹನ, ಮೃತದೇಹ ಪತ್ತೆ ಕಾರ್ಯಾಚರಣೆ
ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದಲ್ಲಿ ಸುರತ್ಕಲ್ ನಿಂದ ರಾಡಾರ್ ತರಿಸಿ ವಾಹನ ಹಾಗೂ ಮೃತದೇಹಗಳ ಪತ್ತೆ ಮಾಡಲಾಗುತ್ತಿದೆ.
ಶನಿವಾರ ಶಿರೂರಿನಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ತೆರವು ಹಾಗೂ ಶೋಧ ಕಾರ್ಯ ವೇಗವಾಗಿ ನಡೆಯುತ್ತಿದೆ. ಇನ್ನು ಎರಡು ದಿನ ಬೇಕಾಗಬಹುದು. ಹೆಲಿಕಾಪ್ಟರ್ ತರಿಸಿ ನದಿಯಲ್ಲಿ ಶೋಧ ನಡೆಸುವ ಯೋಜನೆಯೂ ಇತ್ತು. ಹವಾಮಾನ ವೈಪರೀತ್ಯದಿಂದ ಸಾಧ್ಯವಿಲ್ಲ. ಇದೀಗ ಸುರತ್ಕಲ್ ನಿಂದ ರಡಾರ್ ತರಿಸಿ ಶೋಧ ನಡೆಸುತ್ತಿದ್ದೇವೆ. ಹೆದರುವ ಅವಶ್ಯಕತೆ ಇಲ್ಲ. ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ನದಿಯಲ್ಲಿಯೂ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮತ್ತು ನೌಕಾನೆಲೆಯ ತಂಡ ಶೋಧ ನಡೆಸುತ್ತಿದೆ. ಮೊಬೈಲ್ ರಿಂಗ್ ಆದ ಬಗ್ಗೆಯೂ ಸುದ್ದಿ ಇದೆ. ಆದರೆ ಅದು ಸಾಧ್ಯವಿಲ್ಲ. ಮೀನುಗಾರರಿಗೆ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
Next Story