ಭಟ್ಕಳ | ಕಳ್ಳನಂತೆ ಬಂದು ಅಜ್ಜಿಯನ್ನೇ ದರೋಡೆಗೈದ ಮೊಮ್ಮಗ

ಭಟ್ಕಳ: ವಯೋವೃದ್ಧೆ ಅಜ್ಜಿಯನ್ನು ಕಳ್ಳನಂತೆ ಮುಖವಾಡ ಧರಿಸಿ ಬಂದು ಮೊಮ್ಮಗನೇ ದರೋಡೆ ನಡೆಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ಮಾರ್ಚ್ 17, ರಮಝಾನ್ ಸಮಯ. ಮನೆಯವರೆಲ್ಲಾ ಜೊತೆಯಾಗಿ ಸೆಹರಿ ಉಪಹಾರ ಸೇವಿಸಿದರು. ಆ ಬಳಿಕ ಪುರುಷರು ಬೆಳಗ್ಗಿನ ನಮಾಝ್‌ಗೆ ಮಸೀದಿಗೆ ತೆರಳಿದರು. ಮಹಿಳೆಯರು ಪ್ರಾರ್ಥನೆಯಲ್ಲಿ ನಿರತರಾದರು. ಇದೇ ಸಮಯವನ್ನು ಉಪಯೋಗಿಸಿಕೊಂಡು ಮುಖವಾಡವನ್ನು ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ನುಗ್ಗಿ ವಯೋವೃದ್ಧೆಯ ಬಾಯಿಯನ್ನು ಮುಚ್ಚಿ, ಕತ್ತು ಹಿಸುಕಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದನು.
ದರೋಡೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಆರೋಪಿಯ ಪತ್ತೆಗೆ ಬಲೆ ಬೀಸಿದರು. ಮನೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಕೃತ್ಯವು 4 ನಿಮಿಷಗಳಲ್ಲಿ ನಡೆದಿದೆ ಎಂಬುವುದನ್ನು ಪತ್ತೆ ಹೆಚ್ಚಿದರು.
ದರೋಡೆಯ ಹಿನ್ನೆಲೆ ಸಂತ್ರಸ್ತೆಯ ಮೊಮ್ಮಗ ತಾಜಮ್ಮುಲ್ ಹಸನ್ ಅಸ್ಕೇರಿ(46) ಅಜ್ಜಿಯ ಪರವಾಗಿ ಪೊಲೀಸ್ ದೂರು ನೀಡಿದನು. ಅಪರಾಧಿಯನ್ನು ಪತ್ತೆಹಚ್ಚಲು ಆತ ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ನಟಿಸಿದನು. ಆದರೆ, ತನಿಖೆ ಮುಂದುವರಿದಂತೆ ಪೊಲೀಸರು ಆತನನ್ನೇ ಬಂಧಿಸಿದರು.
ಈ ಕುರಿತು ವಾರ್ತಾಭಾರತಿ ಜೊತೆ ಮಾತನಾಡಿದ ಭಟ್ಕಳ ನಗರ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ್, ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಾಜಮ್ಮುಲ್ ಹಸನ್ ಅಸ್ಕೇರಿಯನ್ನು ಬಂಧಿಸಿರುವುದನ್ನು ದೃಢಪಡಿಸಿದರು.
ಅಪರಾಧ ಕೃತ್ಯದ ನಂತರ, ಆರೋಪಿಯು ಆರಂಭದಲ್ಲಿ ಮನೆಯಲ್ಲಿಯೇ ಇದ್ದನು. ಆದರೆ, ಎರಡು ದಿನಗಳ ನಂತರ ಮನೆಯಿಂದ ಪರಾರಿಯಾದನು. ಈ ಮೊದಲು ಕೂಡ ಆತ ಇಂತಹದ್ದೇ ಕೃತ್ಯವನ್ನು ಎಸಗಿದ್ದ. ಈ ವೇಳೆ ಕುಟುಂಬವು ಮಧ್ಯಪ್ರವೇಶಿಸಿ ಇತ್ಯರ್ಥ ಮಾಡಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.