ಭಟ್ಕಳ: ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಮೂವರ ತಂಡ; ಪ್ರಕರಣ ದಾಖಲು
ಭಟ್ಕಳ: ತಾಲೂಕಿನ ಪುರವರ್ಗ ರೈಲ್ವೆ ಹಳಿ ಸಮೀಪ ಓರ್ವ ಯುವಕನ ಮೇಲೆ ಮೂವರು ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಭಟ್ಕಳ ತಾಲೂಕಿನ ಯಲ್ವಡಿಕವೂರು ಭಗತ ನಗರ ನಿವಾಸಿ ನಾಗರಾಜ ಲಕ್ಷ್ಮಣ ನಾಯ್ಕ (24) ಚಾಕು ಇರಿತಕ್ಕೊಳಗಾದ ಯುವಕ.
ಆರೋಪಿಗಳನ್ನು ಪುರವರ್ಗದ ಮಂಜುನಾಥ ಮಾಸ್ತಪ್ಪ ನಾಯ್ಕ, ಹಡೀನದ ದಯಾನಂದ ವೈಕುಂಠ ನಾಯ್ಕ ಮತ್ತು ಭಟ್ಕಳದ ಶಿವರಾಜು ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳು ನಾಗರಾಜನ ಗೆಳೆಯರೆನ್ನಲಾಗಿದ್ದು, ಅವರ ನಡುವೆ ಹಿಂದಿನ ವೈಷಮ್ಯ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಕಳೆದ ಜನವರಿಯಲ್ಲಿ ಭಟ್ಕಳದ ಸೋಡಿಗದ್ದೆ ಜಾತ್ರೆ ವೇಳೆ ಮಂಜುನಾಥ ನಾಯ್ಕ ಮತ್ತು ದಯಾನಂದ ನಾಯ್ಕ ಸೇರಿ ವೆಂಕಟೇಶ ಮಂಜುನಾಥ ನಾಯ್ಕ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಅವರ ವಿರುದ್ಧ ಜ.25ರಂದು ಪ್ರಕರಣ ದಾಖಲಾಗಿತ್ತು. ಈ ಹಿಂದಿನ ಘಟನೆಯ ದ್ವೇಷದಿಂದಲೇ ನಾಗರಾಜ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಮಂಗಳವಾರ ರಾತ್ರಿ 11.40ರ ಸುಮಾರಿಗೆ, ನಾಗರಾಜ ಮತ್ತು ಆತನ ಗೆಳೆಯ ಲೊಕೇಶ ಗಣಪತಿ ನಾಯ್ಕ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದಾಗ, ಪುರವರ್ಗದ ರೈಲ್ವೆ ಹಳಿ ಹತ್ತಿರ ಅವರನ್ನು ತಡೆದ ಆರೋಪಿಗಳು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಂಜುನಾಥ ನಾಯ್ಕ ತನ್ನ ಬಳಿ ಇದ್ದ ಚಾಕುವಿನಿಂದ ನಾಗರಾಜನ ಮೇಲೆ ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಹಲ್ಲೆಗೊಳಗಾದ ನಾಗರಾಜ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28