ಭಟ್ಕಳ: ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯಕ್ಕೆ ನುಗ್ಗಿ ತಂಡದಿಂದ ದಾಂಧಲೆ, ವಿದ್ಯಾರ್ಥಿಗಳಿಗೆ ಹಲ್ಲೆ
ಪ್ರಕರಣ ದಾಖಲು
ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ತಂಡವೊಂದು ನುಗ್ಗಿ ದಾಂಧಲೆ ನಡೆಸಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ.
ಹುರುಳಿಸಾಲ್ ನಿವಾಸಿ ರಾಘವೇಂದ್ರ ಅಲಿಯಾಸ್ ಬಾಬು ರಾಮಾ ನಾಯ್ಕ, ತಲಗೋಡ ನಿವಾಸಿ ನಂದನ ಜೈನ್ ಹಾಗೂ ಮತ್ತೋರ್ವನ ವಿರುದ್ಧ ನಿಲಯ ಪಾಲಕರಾದ ನಾಗೇಂದ್ರ ಅವರು ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಡಿ.31ರ ರಾತ್ರಿ ಆರೋಪಿಗಳು ಕೈಯಲ್ಲಿ ಕೋಲು, ಕ್ರಿಕೆಟ್ ಸ್ಟಂಪ್ ಹಿಡಿದುಕೊಂಡು ಬಂದು ವಸತಿ ನಿಲಯದೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಹಾಸ್ಟೆಲ್ ಕೋಣೆಯ ಬಾಗಿಲು, ಕುರ್ಚಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಂದರ್ಭ ಹಾಸ್ಟೆಲ್ ವಿದ್ಯಾರ್ಥಿ ನವೀದ್ ಮನ್ಸೂರ್ ಖಾನ್ ಎಂಬಾತನಿಗೆ ಕೋಲಿನಿಂದ ಬಲವಾಗಿ ಹೊಡೆದು ಗಾಯಗೊಳಿಸಿ, ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಶಹರ ಠಾಣೆಯ ಪಿ.ಎಸ್. ಐ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.