ಭಟ್ಕಳ: ಸರಣಿ ಕಳ್ಳತನ ಆರೋಪಿ ಪೊಲೀಸ್ ವಶಕ್ಕೆ
ಭಟ್ಕಳ: ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆದ ಅಂಗಡಿ, ಮನೆಗಳ ಕಳವು ಪ್ರಕರಣ ಸೇರಿದಂತೆ ಇತ್ತಿಚೆಗೆ ಭಟ್ಕಳದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರಠಾಣಾ ಪೊಲೀಸರು ಗುರುವಾರ ಸಂಜೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ವಶದಲ್ಲಿರುವ ಆರೋಪಿಯನ್ನು ಭಟ್ಕಳ ಪುರಸಭೆ ವ್ಯಾಪ್ತಿಯ ಕಿದ್ವಾಯಿ ರೋಡ್ ನಿವಾಸಿ ರಹೀಖ್ ರೊಡ್ಡ(24) ಎಂದು ಗುರುತಿಸಲಾಗಿದೆ.
ಆರೋಪಿ ರಹೀಖ್ ವಿರುದ್ಧ ಈ ಹಿಂದೆ 2022 ಜುಲೈ ತಿಂಗಳಿನಲ್ಲಿ ಕುಂದಾಪುರ ಬಿಜೂರಿನಲ್ಲಿ ನಡೆದ ಮೊಬೈಲ್ ಪೋನ್ ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಮನೆ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುಂದಾಪುರ ಹಿರಿಯಡ್ಕ ಪೊಲೀಸರು 2022 ರ ಅಕ್ಟೋಬರ್‌ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ನಂತರ ಆತನನ್ನು 2022 ರ ನವೆಂಬರ್‌ನಲ್ಲಿ ಬಂಧಿಸಿ ಕರೆ ತರಲಾಗಿತ್ತು. ಭಟ್ಕಳ ಸರಣಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ರಹೀಖ್ ಜೊತೆ 3-4 ಮಂದಿ ಭಾಗಿಯಾಗಿರುವ ಅನುಮಾನ ಇದ್ದು ಅವರ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಎಲ್ಲ ಆರೋಪಿಗಳು ಇತ್ತೀಚಿಗೆ ಬೆಳಕಿಗೆ ಬಂದಿದ್ದ ಹೊಟೆಲ್, ಶಿವಾನಂದ ಗ್ಯಾರೇಜ್, ಭಾರತ್ ಗ್ಯಾಸ್ ವಿತರಣಾ ಮಳಿಗೆ ಸೇರಿದಂತೆ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತಪಡಿಸಲಾಗಿದೆ.ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಟಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವಾಯ್‌ಎಸ್ಪಿ ಮಹೇಶ, ಸಿಪಿಐ ಗೋಪಾಲಕೃಷ್ಣ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.