ಭಟ್ಕಳ| ಶಾಲಾ ವ್ಯಾನ್‌ನಲ್ಲಿ ಬೆಂಕಿ: ವಿದ್ಯಾರ್ಥಿಗಳು ಸುರಕ್ಷಿತ
ಭಟ್ಕಳ: ಇಲ್ಲಿನ ನ್ಯೂ ಶಮ್ಸ್ ಶಾಲೆಗೆ ಸೇರಿದ ವ್ಯಾನ್‌ವೊಂದು ಶಾರ್ಟ್ ಸರ್ಕೀಟ್ ನಿಂದಾಗಿ ಹೊತ್ತಿ ಉರಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಐಸ್ ಫ್ಯಾಕ್ಟರಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ವರದಿಗಳ ಪ್ರಕಾರ, ಶಾಲಾ ವ್ಯಾನ್ ಮಧ್ಯಾಹ್ನ 1:45ರ ಸುಮಾರಿಗೆ ಶಿರಾಲಿ ಕಡೆಗೆ ವಿದ್ಯಾರ್ಥಿಗಳನ್ನು ಬಿಡಲು ಹೊರಟಿತ್ತು. ಇಂಜಿನ್ ಬಳಿ ಹೊಗೆ ಕಾಣಿಸಿಕೊಂಡಂತೆ ಸಮಯ ಪ್ರಜ್ಞೆಯನ್ನು ಮೆರೆದ ವಾಹನ ಚಾಲಕ ಮನಾಝಿರ್ ತಕ್ಷಣ ವಾಹನವನ್ನು ಹೆದ್ದಾರಿ ಬದಿಗೆ ನಿಲ್ಲಿಸಿ, ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಬೇರೊಂದು ವಾಹನದ ವ್ಯವಸ್ಥೆ ಮಾಡಿ ಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಿದ್ದಾರೆ. ವಾಹನದಲ್ಲಿ ಹೊಗೆ ಕಾಣಿಸುತ್ತಿದ್ದಂತೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದವರು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ದಳ ಬರುವ ಮುನ್ನವೇ ಹೊಗೆ ಜ್ವಾಲೆಯಾಗಿ ಮಾರ್ಪಟ್ಟಿದ್ದು, ಟೆಂಪೋ ಸಂಪೂರ್ಣ ಬೆಂಕಿಯಿಂದ ಆವರಿಸಲ್ಪಟ್ಟಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು ಮತ್ತು ಬೆಂಕಿಯು ಇನ್ನಷ್ಟು ಹರಡದಂತೆ ತಡೆಗಟ್ಟಲಾಗಿದೆ.
ಘಟನೆಯ ಮಾಹಿತಿ ಪಡೆದ ಭಟ್ಕಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಚಂದನ್ ಗೋಪಾಲ್ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.