ಭಟ್ಕಳ: ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
ಭಟ್ಕಳ: ಪೊಲೀಸ್ ಠಾಣೆಯಲ್ಲಿ ನಡೆದ ವಾಗ್ವಾದದ ನಂತರ ಮನೆಗೆ ತೆರಳಿದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪಿ.ಎಸ್.ಐ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಮಣಕುಳಿ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಮಾರುತಿ ನಾಗಪ್ಪ ನಾಯ್ಕ್ (63) ಎಂದು ಗುರುತಿಸಲಾಗಿದೆ. ಘಟನೆ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸ್ರೋಳಿಯಲ್ಲಿ ಬುಧವಾರ ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಮಾರುತಿ ನಾಯ್ಕರ ಬೈಕ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ಬೈಕ್ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಮತ್ತು ಮಾರುತಿ ನಾಯ್ಕರ ನಡುವೆ ವಾಗ್ವಾದ ನಡೆದಿದೆ. ಬೈಕ್ ಮರಳಿ ಕೊಡಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾರುತಿ ನಾಯ್ಕ್ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ಹಾಡು ವಳ್ಳಿಯ ಗ್ರಾ.ಪಂ ವ್ಯಾಪ್ತಿಯ ಹಸ್ರೋಳಿಯ ತನ್ನ ಹಳೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆತ್ಮಹತ್ಯೆಗೂ ಮುನ್ನ ಮಾರುತಿ ನಾಯ್ಕ್ ಪೊಲೀಸರ ಜತೆಗಿನ ವಾಗ್ವಾದ ಹಾಗೂ ಅಗೌರವ ತೋರಿದ ಬಗ್ಗೆ ದೂರವಾಣಿ ಯಲ್ಲಿ ಮಾತನಾಡಿದ್ದು ಆ ಸಂಭಾಷಣೆ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ವಿರುದ್ಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.