ಭಟ್ಕಳ: ಹೆಬಳೆ ಪಂಚಾಯತ್ ವ್ಯಾಪ್ತಿಯ ಅನಧಿಕೃತ ‘ನಾಮಫಲಕ’, ಭಗವಾದ್ವಜ ತೆರವು; ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಗಿನಗುಂಡಿ ಬೀಚ್ ನಲ್ಲಿ ಸೋಮವಾರದಂದು ಸಂಸದ ಅನಂತ್ ಕುಮಾರ್ ಹೆಗಡೆ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಸೇರಿ ಕಾನೂನುಬಾಹಿರವಾಗಿ ಹಾರಿಸಲಾಗಿದ್ದ ಹನುಮ ಧ್ವಜ ಮತ್ತು ‘ವೀರ ಸಾವರ್ಕರ್ ಕಟ್ಟೆ’ ನಾಮಫಲಕವನ್ನು ಬುಧವಾರ ರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಗೊಂದಲ ಹಾಗೂ ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಂಗಳವಾರದಂದು ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಆಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮುಂಚಿನ ದಿನವಾದ ಜ.21 ರಂದು ಸಂಘಪರಿವಾರದ ಸದಸ್ಯರು ಅನಧಿಕೃತವಾಗಿ ʼವೀರಸಾವರ್ಕರ್ ಕಟ್ಟೆʼ ನಾಮಫಲಕ ಅಳವಡಿಸಿ ಅಲ್ಲಿ ಭಗವಾ ದ್ವಜವನ್ನು ಹಾರಿಸಿದ್ದರು. ಪಂಚಾಯತ್ ಆಡಳಿತ ಇದರ ವಿರುದ್ಧ ದೂರು ನೀಡಿದ ನಂತರ ಜ.28ರಂದು ಪೊಲೀಸರು ಇದನ್ನು ತೆರವುಗೊಳಿಸಿದ್ದರು. ನಂತರದ ಬೆಳವಣೆಗೆಯಲ್ಲಿ ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜ.30ರಂದು ಹೆಬಳೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು.
ಮಾ.5 ಸೋಮವಾರದಂದು ಭಟ್ಕಳಕ್ಕೆ ಬಂದ ಅನಂತ್ ಕುಮಾರ್ ಹೆಗಡೆ, ಕಾರ್ಯಕರ್ತರೊಂದಿಗೆ ತೆಂಗಿನಗುಂಡಿ ಬೀಚ್ ಗೆ ತೆರಳಿ ಅಕ್ರಮವಾಗಿ ಹನುಮದ್ವಜ ಹಾರಿಸಿ ವೀರಸಾವರ್ಕರ್ ಎಂಬ ನಾಮಫಲಕ ಅಳವಸಿದ್ದರು. ಇದಾದ ಎರಡು ದಿನಗಳ ನಂತರ ಬುಧವಾರ ಮಧ್ಯರಾತ್ರಿ ತೆಂಗಿನಗುಂಡಿ ಬೀಚ್ ನಲ್ಲಿ ಅಳವಡಿಸಿದ್ದ ಅನಧಿಕೃತ ನಾಮಫಲಕ ಮತ್ತು ಹನುಮದ್ವಜವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಅನಧಿಕೃತ ದ್ವಜಸ್ಥಂಭ ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹ:
ಪೊಲೀಸರು ಕೇವಲ ಹನುಮದ್ವಜ ಮತ್ತು ನಾಮಫಲಕ ಮಾತ್ರ ತೆರವುಗೊಳಿಸಿದ್ದಾರೆ. ಆದರೆ ಅಕ್ರಮವಾಗಿ ನಿರ್ಮಿಸಿರುವ ದ್ವಜ ಕಟ್ಟೆಯನ್ನು ಹಾಗೆಯೇ ಬಿಟ್ಟಿದ್ದು ಇದು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ಮೀನುಗಾರರು ಅನಧಿಕೃತವಾಗಿ ಕಟ್ಟಿಕೊಂಡಿರುವ ಕಟ್ಟೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಸ್ಥಳೀಯ ಮೀನುಗಾರರ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಲ್ಲಿ ಎಲ್ಲ ಸಮುದಾಯದವರು ಅತ್ಯಂತ ಶಾಂತರೀತಿಯಿಂದ ಜೀವಿಸುತ್ತಿದ್ದಾರೆ. ಸಂಘಪರಿವಾರ ಇಲ್ಲಿ ಅಶಾಂತಿಯನ್ನು ಹುಟ್ಟುಹಾಕಲು ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇಲ್ಲಿನ ಜನರು ಇದಕ್ಕೆ ಕಿವಿಗೊಡುವುದಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿನ ಶಾಂತಿಯನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.