ಭಟ್ಕಳ: ಅ.20ರಂದು ದಿ.ಕಾಶಿಫ್ ಸ್ಮರಣಾರ್ಥ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್
ಭಟ್ಕಳ: ಆಝಾದ್ ನಗರದ ಅಮರ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡಮಿ (AKFA), ಸಂಸ್ಥೆಯು ಕರಾಟೆ ಪಟು ದಿ.ಕಾಶಿಫ್ ರುಕ್ನುದ್ದೀನ ಸ್ಮರಣಾರ್ಥ ಅ.20ರಂದು ಭಟ್ಕಳದ ಅಮೀನ ಪ್ಯಾಲೇಸ್ ನಲ್ಲಿ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಆಯೋಜಿಸಿದೆ ಎಂದು ಸಂಘಟಕ ಅಮರ್ ಶಾಬಂದ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ 5 ರಾಜ್ಯಗಳಿಂದ 600-800ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 15ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಗಳು ಸ್ಪರ್ಧಿಸುವರು. ಇದರೊಂದಿಗೆ, ಕರಾಟೆ ಇಂಡಿಯಾ ಆರ್ಗನೈಸೇಶನ್ (KIO) ನಿಂದ ಪ್ರಮಾಣಿತ 20 ಕ್ಕೂ ಹೆಚ್ಚು ರೆಫರಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್. ವೈದ್ಯ, ಗೌರವ ಅತಿಥಿಯಾಗಿ ಹ್ಯಾಂಗ್ಯೋ ಐಸ್ ಕ್ರೀಮ್ ಪ್ರೈ ಲಿ. ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ಪುರಸಭಾ ಉಪಾಧ್ಯಕ್ಷ ಮುಹಿಯುದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸೈಯದ್ ಇಮ್ರಾನ್ ಲಂಕಾ, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾದಿಕ್ ಶಾಬಂದ್ರಿ, ಭಟ್ಕಳ ಕಮ್ಯುನಿಟಿ ಜೆದ್ದಾ ಅದ್ಯಕ್ಷ ಖಮರ್ ಸಾದಾ, ಸಮಾಜ ಸೇವಕ ನಝೀರ್ ಕಾಶಿಮಜಿ, ಲೈಫ್ ಕೇರ್ ಆಸ್ಪತ್ರೆಯ ವ್ಯವಸ್ಥಾಪ ನಿದೇರ್ಶಕ ಸಲ್ಮಾನ್ ಆಹ್ಮದ್ ಜುಬಾಪು, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ರುಕ್ನುದ್ದೀನ್, ರೋಟರಿ ಕ್ಲಬ್ ಅಧ್ಯಕ್ಷ ಇಷ್ತಿಯಾಕ್ ಹಸನ್, ಕರ್ನಾಟಕ ಕರಾಟೆ ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರ್ಗವ ರೆಡ್ಡಿ, ಅಡಳಿತಾತ್ಮಕ ಕಾರ್ಯದರ್ಶಿ ಕೀರ್ತಿ ಜಿ.ಕೆ ಭಾಗವಹಿಸಲಿದ್ದಾರೆ.
5 ವರ್ಷದಿಂದ ಎಲ್ಲಾ ವಯೋಮಾನದ ಹುಡುಗರು ಮತ್ತು ಹುಡುಗಿಯರು "ಕಟಾ" ಮತ್ತು "ಕುಮಿಟೆ" ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.
ಚಿನ್ನದ ಪದಕ ವಿಜೇತರಿಗೆ ವಿಶೇಷ ಅವಕಾಶ: ಆಯಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರು, "ಗ್ರ್ಯಾಂಡ್ ಚಾಂಪಿಯನ್‌ಶಿಪ್" ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ಅವಕಾಶವನ್ನು ಪಡೆಯುತ್ತಾರೆ. ಈ ವಿಭಾಗದಲ್ಲಿ ವಿಜೇತರಿಗೆ ಟ್ರೋಫಿ ಮತ್ತು ರೂ. 5000 ನಗದು ಬಹುಮಾನ ನೀಡಲಾಗುತ್ತದೆ.
ಗ್ರ್ಯಾಂಡ್ ಚಾಂಪಿಯನ್ ಶಿಪ್ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿದೆ.1 4 ವರ್ಷದೊಳಗಿನ ಬಾಲಕರು 14 ವರ್ಷಕ್ಕಿಂತ ಮೇಲ್ಪಟ್ಟ ಬಾಲಕರು ಮತ್ತು ಮಹಿಳಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ್ ನಾಯ್ಕ, ಉಪಾಧ್ಯಕ್ಷ ಈಶ್ವರ್ ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾದಿಕ್ ಶಾಬಂದ್ರಿ, ರೋಟರಿ ಕ್ಲಬ್ ಅಧ್ಯಕ್ಷ ಇಷ್ತಿಯಾಕ್ ಹಸನ್ ಕರಾಟೆ ಪಟು ಇಹಾಬ್ ರುಕ್ನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.