2024ರ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿಗೆ ಭಟ್ಕಳದ ಡಾ. ಹನೀಫ್ ಶಬಾಬ್ ಆಯ್ಕೆ

ಬೆಂಗಳೂರು: ಹಿರಿಯ ಉರ್ದು ವಿದ್ವಾಂಸ, ಕವಿ, ಶಿಕ್ಷಣತಜ್ಞ ಭಟ್ಕಳದ ಡಾ.ಹನೀಫ್ ಶಬಾಬ್ ಅವರಿಗೆ ʼಉರ್ದು ಸಾಹಿತ್ಯಕ್ಕೆ ಅಮೋಘ ಕೊಡುಗೆʼಗಾಗಿ ʼ2024ರ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿʼಗೆ ಆಯ್ಕೆ ಮಾಡಲಾಗಿದೆ.
ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಡಾ.ಹನೀಫ್ ಶಬಾಬ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಭಟ್ಕಳದ ಡಾ.ಹನೀಫ್ ಶಬಾಬ್ ಉರ್ದು ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕವಿಯಾಗಿ, ಶಿಕ್ಷಕರಾಗಿ, ಸಂಶೋಧಕರಾಗಿ, ಮಾರ್ಗದರ್ಶಕರಾಗಿ ಗಣನೀಯ ಕೊಡುಗೆ ನೀಡಿರುವ ಡಾ.ಹನೀಫ್ ಶಬಾಬ್ ಅವರು ಬರಹ, ಸಾಹಿತ್ಯ ಕೃತಿಗಳ ಮೂಲಕ ದಶಕಗಳಿಂದ ಉರ್ದು ಭಾಷೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಡಾ.ಹನೀಫ್ ಶಬಾಬ್ ಅವರ ಸಂಶೋಧನೆ ಮತ್ತು ಉರ್ದು ಕವಿತೆಗಳ ಕುರಿತ ವಿಮರ್ಶಾತ್ಮಕ ವಿಶ್ಲೇಷಣೆಗಳು ವ್ಯಾಪಕ ವಾಗಿ ಗುರುತಿಸಲ್ಪಟ್ಟಿವೆ. ಅವರು ಹೊಸ ಪೀಳಿಗೆಯ ಉರ್ದು ವಿದ್ವಾಂಸರನ್ನು ಪೋಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಭಟ್ಕಳದ ಶಾಮ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುದೀರ್ಘ 25 ವರ್ಷಗಳ ಕಾಲ ಉರ್ದು ಶಿಕ್ಷಕರಾಗಿ ಕೆಲಸ ಮಾಡಿರುವ ಡಾ.ಹನೀಫ್ ಶಬಾಬ್ ಕಾರ್ಯಾಗಾರಗಳು ಮತ್ತು ಸಾಹಿತ್ಯೋತ್ಸವಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ʼಔರ್ ಲೈನ್ ಕಟ್ ಗಯಿʼ(Aur Line Cut Gayi) ಎಂಬ ಅವರ ಕವಿತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕೃತಿಗಳಲ್ಲಿ ಒಂದಾಗಿದೆ. ಈ ಕೃತಿಯ ಮೂಲಕ ಅವರು ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸ್ವರ್ಗದಿಂದ ಮಾತನಾಡುವ ಹೆಣ್ಣು ಮಗು ಮತ್ತು ತಾಯಿಯ ನಡುವಿನ ಸಂಭಾಷಣೆಯು ಅವರ ಕವಿತೆಯ ಸಾಲುಗಳಲ್ಲಿದೆ.
ಇದಲ್ಲದೆ ಡಾ.ಶಬಾಬ್ ಅವರು ಉರ್ದು ಪತ್ರಿಕೋದ್ಯಮಕ್ಕೂ ಗಣನೀಯ ಕೊಡುಗೆ ನೀಡಿದರು. ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಆಳವಾದ ದೃಷ್ಟಿಕೋನಗಳನ್ನು ಹೊಂದಿರುವ ಅವರ ಲೇಖನಗಳು, ಸಂಪಾದಕೀಯಗಳು ಮತ್ತು ಸಾಹಿತ್ಯ ವಿಮರ್ಶೆಗಳು ಉರ್ದು ಮಾಧ್ಯಮದ ಮೇಲೆ ಪ್ರಭಾವ ಬೀರಿವೆ.
ಡಾ.ಶಬಾಬ್ ಅವರು ಎರಡು ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ. ಇವೆರಡೂ ಅವರು ಕವನಗಳ ಸಂಗ್ರಹಗಳಾಗಿವೆ. ಅವರ ಮೊದಲ ಪುಸ್ತಕ, "ಸುಲಗ್ತೆ ಖ್ವಾಬ್,( Sulagte Khwaab ) 1997ರಲ್ಲಿ ಬಿಡುಗಡೆಯಾಯಿತು. ಅವರ ಎರಡನೇ ಪುಸ್ತಕ "ಲಹು ಲಾಹು ಮೌಸಮ್ʼ (Lahu Lahu Mausam) 2009ರಲ್ಲಿ ಪ್ರಕಟವಾಯಿತು.