ದಾಂಡೇಲಿ: ಮೊಸಳೆಗಳಿರುವ ನಾಲೆಗೆ ಮಗುವನ್ನು ಎಸೆದ ತಾಯಿ: ಮೃತದೇಹ ಪತ್ತೆ
ದಾಂಡೇಲಿ, ಮೇ 5: ಪತಿ-ಪತ್ನಿಯ ಜಗಳದ ಕೋಪದಲ್ಲಿ ಆರು ವರ್ಷದ ಮಗನನ್ನು ತಾಯಿ ಮೊಸಲೆಗಳಿರುವ ನಾಲೆಗೆ ಎಸೆದ ಅಮಾನವೀಯ ಘಟನೆ ಶನಿವಾರ ರಾತ್ರಿ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿರುವುದು ವರದಿಯಾಗಿದೆ.
ತೀವ್ರ ಶೋಧದ ಬಳಿಕ ಮಗುವಿನ ಮೃತದೇಹ ಇಂದು ಬೆಳಗ್ಗೆ ನಾಲೆಯ ಬಳಿ ಪತ್ತೆಯಾಗಿದೆ.
ಕೊಲೆಯಾದ ಮಗುವನ್ನು 6 ವರ್ಷದ ವಿನೋದ್ ಎಂದು ಗುರುತಿಸಲಾಗಿದೆ. ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಎಂಬವರ ಪತ್ನಿ ಸಾವಿತ್ರಿ ಮಗುವನ್ನು ನಾಲೆಗೆ ಎಸೆದ ಆರೋಪಿ. ಈ ದಂಪತಿ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಪತಿಯ ಮೇಲಿನ ಕೋಪದಿಂದ ಸಾವಿತ್ರಿ ಶನಿವಾರ ರಾತ್ರಿ ಮಗು ವಿನೋದ್ ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದುಬಂದಿದ್ದಾಳೆ ಎನ್ನಲಾಗಿದೆ. ಬಳಿಕ ಈ ಬಗ್ಗೆ ಆಕೆ ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ತಕ್ಷಣವೇ ಸ್ಥಳೀಯರು ನಾಲೆ ಹತ್ತಿರ ತೆರಳಿ ಮಗುವಿನ ಹುಡುಕಾಟ ನಡೆಸಿದ್ದಾರೆ. ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಸಹಕಾರದಲ್ಲಿ ಹಾಗೂ ಸ್ಥಳೀಯ ಮುಳುಗು ತಜ್ಞರ ಮತ್ತು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶೋಧ ನಡೆಸಿದ್ದಾರೆ. ತೀವ್ರ ಹುಡುಕಾಟದ ಬಳಿಕ ಇಂದು ಬೆಳಗ್ಗೆ ನಾಲೆಯ ಬಳಿ ಮಗುವಿನ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.