ಭಟ್ಕಳದಲ್ಲಿ ವೈದ್ಯರ ಪ್ರತಿಭಟನೆ
ಭಟ್ಕಳ: ಮಹಿಳಾ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆಗೈದ ಘಟನೆಯಿಂದಾಗಿ ದೇಶದಾದ್ಯಂತ ಶನಿವಾರ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯ ಕಾವು ಭಟ್ಕಳದಲ್ಲಿ ಸಾರ್ವಜನಿಕರಿಗೆ ತಟ್ಟಿದ್ದು ಹಲವು ರೋಗಿಗಳು ತೊಂದರೆಯಲ್ಲಿ ಸಿಲುಕಿಕೊಂಡರು.
ಶಾಲಾ ವಿದ್ಯಾರ್ಥಿಯೊಬ್ಬನಿಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಸಂಕಷ್ಟದಲ್ಲಿ ಸಿಲುಕಿದಂತಾಗಿತ್ತು ಎಂದು ಹೇಳಲಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಬಂದ ರೋಗಿಗಳು ಕೂಡ ಪರದಾಡುವಂತಾಯಿತು.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಭಟ್ಕಳ ಹಾಗೂ ತಾಲೂಕಿನ ಖಾಸಗಿ ವೈದ್ಯರ ತಂಡ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಾಲೂಕಾ ಆಡಳಿತ ಸೌಧಕ್ಕೆ ಬಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.
ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯು ಮಾನವ ಜಗತ್ತು ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರ ಆತ್ಮಸ್ಥೆರ್ಯವನ್ನು ಕುಂದುವಂತೆ ಮಾಡಿದೆ ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ. ಸಮಾಜದಲ್ಲಿನ ಇಂತಹ ದುಷ್ಟರಿಗೆ ಅತ್ಯಂತ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಬಹುದಾಗಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ ಕೋಲ್ಕತ್ತಾದಲ್ಲಿ ನಡೆದ ಈ ಘಟನೆ ನಮ್ಮೆಲ್ಲರಿಗೂ ನೋವಿನ ಸಂಗತಿಯಾಗಿದೆ. ವೈದ್ಯೋ ನಾರಾಯಣ ಹರಿ ಎನ್ನುವುದನ್ನು ಬಿಟ್ಟು ನಮ್ಮನ್ನು ಬದುಕಲು ಬಿಡಿ ಎನ್ನುವ ಪರಿಸ್ಥಿತಿ ಬಂದೊದಗಿದೆ ಬೇಸರಿಸಿದರು.
ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತೆ ಡಾ. ನಯನಾ, ಕೋಲ್ಕತ್ತಾದಲ್ಲಿ ನಡೆದ ಘಟನೆ ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ಇಂತಹ ಘಟನೆ ನಡೆಯಬಾರದಿತ್ತು. ಈ ಪ್ರತಿಭಟನೆ ವೈದ್ಯರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ನಾಗರಿಕರು ವೈದ್ಯರೊಂದಿಗೆ ಕೈಜೋಡಿಸ ಬೇಕು ಎಂದರು.
ಪ್ರತಿಭಟನಾ ಮೆರವಣಿಗೆ ಸುಧೀಂದ್ರ ಕಾಲೇಜು ರಸ್ತೆಯ ಮೂಲಕ ಶಂಸುದ್ದಿನ್ ಸರ್ಕಲ್ ಮಾರ್ಗವಾಗಿ ಆಡಳಿತ ಸೌಧಕ್ಕೆ ಬಂದು ಮುಕ್ತಾಯಗೊಂಡಿತು.