ಅಂಜುಮನ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಭಟ್ಕಳ: ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಅಂತಿಮ ವರ್ಷದ ಬಿ.ಎ., ಬಿಎಸ್ಸಿ., ಬಿ.ಕಾಂ., ಎಂ.ಎ., ಎಂ.ಕಾಂ ವಿದ್ಯಾರ್ಥಿಗಳಿಗಾಗೆ ಪದವಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಕಾಜಿಯಾ ಮೊಹಮ್ಮದ್ ಮುಜಮ್ಮಿಲ್ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಸೇವೆಗಳೆಲ್ಲ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ವಿನಿಯೋಗವಾದಾಗ ಪಡೆದ ಪದವಿ ಸಾರ್ಥಕವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಶ್ಫಾಖ್ ಸದಾ, ಪದವಿಧರ ವಿದ್ಯಾರ್ಥಿಗಳು ಎಲ್ಲ ಜಾತಿ ಮತ ಧರ್ಮದ ಎಲ್ಲೆಯನ್ನು ಮೀರಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಹುಟ್ಟಿದ ಊರು, ಕಲಿತ ಶಾಲಾ ಕಾಲೇಜುಗಳನ್ನು ಮರೆಯದಿರುವಂತೆ ಸಲಹೆ ನೀಡಿದರು.
ಮತ್ತೋರ್ವ ಅತಿಥಿ ಇಸ್ಮಾಯಿಲ್ ಮುಸ್ಬಾ ಮಾತನಾಡಿ, ವಿದ್ಯಾರ್ಥಿಗಳ ನಿಜವಾದ ಜೀವನ ಆರಂಭವಾಗುವುದೇ ಪದವಿ ಮುಗಿದ ಮೇಲೆ. ಸಮಾಜದಲ್ಲಿ ನಾವು ಹೇಗೆ ಬದುಕುತ್ತೇವೆ, ವ್ಯವಹರಿಸುತ್ತೇವೆ ಎಂಬುದರ ಮೇಲೆ ನಾವೆಂಥ ಪದವಿಧರರು ಎಂಬುದು ಸಾಬೀತಾಗುತ್ತದೆ. ನಾವು ಪಡೆದ ಪದವಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎ. ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದ ವಿದ್ಯಾರ್ಥಿ ಶ್ರೇಯಸ್ ನಾಯಕ ರನ್ನ್ನು ಸನ್ಮಾನಿಸಲಾಯಿತು. ಎಲ್ಲ ವಿಭಾಗದಿಂದ ಅತ್ಯುತ್ತಮ ವಿದ್ಯಾರ್ಥಿಗಳನ್ನು, ಬೇರೆ ಬೇರೆ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು, ಕ್ರೀಡಾ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳು ಪದವಿ ಪತ್ರ ಪಡೆದು ಸಂಭ್ರಮಿಸಿದರು. ವಿದ್ಯಾರ್ಥಿ ಮೊಹಿದ್ದೀನ್ ಅಸ್ಬಾ ಮತ್ತು ಪೂಜಾ ನಾಯ್ಕ ಅಂಜುಮನ್ ಕಾಲೇಜಿನಲ್ಲಿ ತಮಗೆ ದೊರೆತ ಸವಲತ್ತು ಮತ್ತು ಸಹಕಾರಗಳನ್ನು ಕುರಿತು ಮಾತನಾಡಿದರು.
ಪ್ರಾಂಶುಪಾಲ ಪ್ರೊ. ಮುಸ್ತಾಕ್ ಶೇಖ ಸ್ವಾಗತಿಸಿದರೆ, ಪ್ರೊ. ಗಾನಿಮ್ ವಂದಿಸಿದರು. ವೇದಿಕೆಯಲ್ಲಿ ಅಂಜುಮನ್ ಸಂಸ್ಥೆಯ ಗೌರವಾನ್ವಿತ ಸದಸ್ಯರು, ಪ್ರೊ. ಹಿಬ್ಬಾನ್, ಪ್ರೊ. ಉಮೇಸ ಮೆಸ್ತಾ ಉಪಸ್ಥಿತರಿದ್ದರು.
ಪ್ರೊ.ಶಾಜೀರ್ ಹುಸೇನ್ ಮತ್ತು ಡಾ. ವಿನಾಯಕ ಕಾಮತರ ಮಾರ್ಗದರ್ಶನದಲ್ಲಿ ಬಿ.ಕಾಂ. ಎರಡನೆಯ ವರ್ಷದ ವಿದ್ಯಾರ್ಥಿಗಳು ಅತ್ಯಂತ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.