ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣ: ಟ್ಯಾಂಕರ್ ಲಾರಿ ಟಯರ್ ಪತ್ತೆ
ಕಾರವಾರ: ಶಿರೂರು ಬಳಿ ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಲಾರಿಯ ಎರಡು ಟಯರ್ ಗಳು ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿಸಲಾಗಿದೆ.
ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರದ ಮೂಲಕ ಶೋಧಕಾರ್ಯ ಮಾಡುವ ವೇಳೆ ದಡದಿಂದ 15 ಅಡಿ ದೂರದಲ್ಲಿ ಟಯರ್ ಇರುವ ಕುರುಹು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ನದಿಯಾಳಕ್ಕೆ ಮುಳುಗಿ ಲಾರಿಯ ಟಯರ್ ಗೆ ಕೇಬಲ್ ಕಟ್ಟಿ ಬಂದಿದ್ದರು.
ಅದರಂತೆ ಡ್ರೆಜ್ಜಿಂಗ್ ಯಂತ್ರದ ಮೂಲಕ ಎರಡು ಟಯರ್ ಮೇಲೆ ಎತ್ತಲಾಗಿದೆ. ಮೊದಲು ಕೇರಳ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಝ್ ಲಾರಿಯ ಎರಡು ಚಕ್ರಗಳು ಎಂದು ತಿಳಿಯಲಾಗಿತ್ತು. ಆದರೆ ಪತ್ತೆಯಾಗಿರುವ ಲಾರಿ ಟಯರ್ ಹಾಗೂ ಕ್ಯಾಬಿನ್ ಗುಡ್ಡ ಕುಸಿತ ಸಂದರ್ಭ ತೇಲಿಹೋಗಿದ್ದ ಟ್ಯಾಂಕರ್‌ನದು ಎಂದು ಗುರುತು ಮಾಡಲಾಗಿದೆ. ಮುಂಭಾಗದ ಎಕ್ಸೆಲ್ ಸಮೇತ ಟಯರ್ ಪತ್ತೆ ಮಾಡಲಾಗಿದೆ. ಇದೀಗ ಇದೇ ಸ್ಥಳದಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ನಿರಂತರ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕೆಲ ಗಂಟೆಯ ಮೊದಲು ಡ್ರೆಜ್ಜರ್ ಮೂಲಕ ಕಾರ್ಯಾ ಚರಣೆ ವೇಳೆ ಮರದ ತುಂಡು ಪತ್ತೆಯಾಗಿತ್ತು. ಇದೀಗ ಮತ್ತೆ ಇದೇ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ.