ಹೊನ್ನಾವರ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ
ಹೊನ್ನಾವರ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಸಾವನ್ನಪ್ಪಿದ ಘಟನೆ ಹೊನ್ನಾವರದಲ್ಲಿ ನಡೆದಿದ್ದು, ಯುವಕನ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿ ಕುಟುಂಬದ ಸದಸ್ಯರು ಹಾಗೂ ನೂರಾರು ಮಂದಿ ಸೇರಿ ಮೃತದೇಹವನ್ನು ಪೊಲೀಸ್ ಠಾಣೆಯ ಹೊರಗೆ ಇಟ್ಟು ಪ್ರತಿಭಟನೆ ನಡೆಸಿದರು.
ಘಟನೆ ವಿವರ: ಹೊನ್ನಾವರದ ಗಾಂಧಿನಗರದ ನಿವಾಸಿ ಮೊಹಮ್ಮದ್ ಇಬ್ರಾಹಿಂ ಆಸಿಫ್ (33) ಅವರನ್ನು ಆ. 18 ರಂದು ಹೊಟ್ಟೆ ನೋವಿನಿಂದಾಗಿ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಸ್ಕ್ಯಾನಿಂಗ್ ಮಾಡಿಸಿದಾಗ ಕಿಡ್ನಿಯಲ್ಲಿ ಕಲ್ಲು ಇರುವುದು ಕಂಡು ಬಂದಿದೆ. ಇದಕ್ಕೆ ಲೇಸರ್ ಚಿಕಿತ್ಸೆ ನೀಡಿದ ವೈದ್ಯರು ಬಳಿಕ ವಾರ್ಡ್ ಗೆ ಸ್ಥಳಾಂತರಿಸಿದ್ದಾರೆ. ಆ.23ರಂದು ಏಕಾಏಕಿ ಆರೋಗ್ಯ ಹದಗೆಟ್ಟಿದ್ದರಿಂದ ರಾತ್ರಿ 8 ಗಂಟೆ ಸುಮಾರಿಗೆ ಸಂಬಂಧಿಕರ ಸಲಹೆ ಮೇರೆಗೆ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಮಣಿಪಾಲ ಆಸ್ಪತ್ರೆಗೆ ತಲುಪಿದಾಗ ಅಲ್ಲಿನ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಾವಿನ ಸುದ್ದಿ ತಿಳಿದ ಕುಟುಂಬಕ್ಕೆ ಆಘಾತವಾಗಿದ್ದು, ಹೊನ್ನಾವರ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಅಥವಾ ತಪ್ಪು ಚಿಕಿತ್ಸೆಗೆ ಯುವಕ ಬಲಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ತಮಗೆ ನ್ಯಾಯ ಒದಗಿಸಿಕೊಡುವಂತೆ ಮೃತಹದೇಹವನ್ನು ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟಿಸಿದ್ದಾರೆ.
ಈ ಬಗ್ಗೆ ಮೃತನ ಪತ್ನಿ ಸಮಿಯಾ ತನ್ನ ಪತಿಯ ಸಾವು ಅನುಮಾನಾಸ್ಪದವಾಗಿದ್ದು, ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕೆಂದು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.